ನವದೆಹಲಿ: ಕಾಂಗ್ರೆಸ್ ನಾಯಕ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾರತೀಯ ಸೇನೆ ಕುರಿತಾದ ಹೇಳಿಕೆಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ್ದು ನಿಜವಾದ ಭಾರತೀಯ ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದಿದೆ.
ಭಾರತ್ ಝೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ, ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಭಾರತೀಯ ಸೇನೆಯ ವಿರುದ್ಧ ಹೇಳಿಕೆ ನೀಡಿದ್ದರು. ಅದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಗೆ ಛೀಮಾರಿ ಹಾಕಿದೆ.
ಚೀನಾ ಭಾರತ 2000 ಕಿ.ಮೀ. ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತು? ನಿಜವಾದ ಭಾರತೀಯನಾಗಿದ್ದರೆ ನೀವು ಈ ರೀತಿ ಹೇಳುತ್ತಿರಲಿಲ್ಲ ಎಂದು ಛೀಮಾರಿ ಹಾಕಿದೆ. ಭಾರತ ಮತ್ತು ಚೀನಾ ಸಂಘರ್ಷದ ಕುರಿತು 2022 ರಲ್ಲಿ ರಾಹುಲ್ ಹೇಳಿಕೆ ಭಾರತೀಯ ಸೇನೆಗೆ ಮಾನಹಾನಿ ತಂದಿದೆ ಮತ್ತು ಸ್ಥೈರ್ಯ ಕುಗ್ಗಿಸಿದಂತಾಗಿದೆ. ಅರುಣಾಚಲಪ್ರದೇಶದಲ್ಲಿ ಭಾರತೀಯ ಯೋಧರನ್ನು ಚೀನಾ ಯೋಧರು ಥಳಿಸುತ್ತಿದ್ದಾರೆ. ಆದರೆ ಅದನ್ನು ಮಾಧ್ಯಮಗಳು ವರದಿ ಮಾಡುವುದಿಲ್ಲ ಎಂದಿದ್ದರು.
ಅವರ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಭಾರತೀಯ ಸೇನೆಯನ್ನೇ ಅನುಮಾನಿಸುವ ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂಕೋರ್ಟ್ ಕೆಂಡಾಮಂಡಲವಾಗಿದೆ.