ಇದು ಅಪ್ಪಟ ಬಿಜೆಪಿಯ ಜಯ, ಮೋದಿಯ ಜಯವಲ್ಲ: ಸುಷ್ಮಾ ಸ್ವರಾಜ್

ಶನಿವಾರ, 17 ಮೇ 2014 (15:55 IST)
ಬಿಜೆಪಿ ಪಕ್ಷ ನಿಚ್ಚಳ ಬಹುಮತ ಸಾಧಿಸಿ ಗೆದ್ದಿರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತ ಇದು ಅಪ್ಪಟ ಬಿಜೆಪಿಯ ಜಯ ಎಂದು ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಅವರ ಸಚಿವ ಸ್ಥಾನದ ಬಗ್ಗೆ ಪ್ರಶ್ನಿಸಿದಾಗ ತಮ್ಮ ಸಚಿವ ಸಂಪುಟವನ್ನು ರಚಿಸುವುದು ಪ್ರಧಾನಮಂತ್ರಿಯ ವಿಶೇಷಾಧಿಕಾರ ಎಂದು ಮೌನಕ್ಕೆ ಶರಣಾಗಿದ್ದಾರೆ. 
 
ಇದು ಬಿಜೆಪಿಗೆ ಸಿಕ್ಕ ನಿಚ್ಚಳ ಜಯ. ಯಾವುದೇ ಒತ್ತಡಗಳಿಲ್ಲದೇ ಸ್ವತಂತ್ರವಾಗಿ ಅಧಿಕಾರ ನಡೆಸಲು ನಾವು ಸಮರ್ಥರಾಗಿದ್ದೇವೆ. ಆದರೆ ನಮ್ಮ ಮೈತ್ರಿಕೂಟದ ಜತೆ ಸೇರಿ ನಾವು ಸರಕಾರ ರಚಿಸಲಿದ್ದೇವೆ ಎಂದು ಸ್ವರಾಜ್ ತಿಳಿಸಿದರು. 
 
ನೀವು ಮೋದಿ ಸರಕಾರದ ಭಾಗವಾಗುತ್ತೀರಾ ಎಂದು ಕೇಳಿದಾಗ, ಅದಕ್ಕುತ್ತರಿಸಲು ನಿರಾಕರಿಸಿದ ಅವರು ಸಮಯಕ್ಕೆ ಮೊದಲು ಅದಕ್ಕೆ ಉತ್ತರಿಸುವುದು ಕಷ್ಟ ಎಂದರು.
 
"ಇಂತಹ ಪ್ರಶ್ನೆಗಳು ಕಾಲ್ಪನಿಕವಾಗಿವೆ. ತನ್ನ ಸಚಿವ ಸಂಪುಟದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಪ್ರಧಾನಿಯ ವಿಶೇಷಾಧಿಕಾರ .ಕೆಲವು ತೀರ್ಮಾನಗಳನ್ನು ಸಂಸದೀಯ ಮಂಡಳಿಯ ಮೂಲಕ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಇಂತಹ ಪ್ರಶ್ನೆಗಳಿಗೆ ಈ ಸಂದರ್ಭದಲ್ಲಿ ಉತ್ತರಿಸಲಾಗುವುದಿಲ್ಲ" ಎಂದು ಹೇಳಿದರು. 
 
ಸ್ವರಾಜ್, ಪಕ್ಷದ ನಾಯಕರು ತಾನು ಬಯಸಿದ ಖಾತೆ ನೀಡಲು ತಯಾರಿಲ್ಲದಿದ್ದಕ್ಕೆ ಮುನಿಸಿಕೊಂಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿದರೆ, ಅವರ ಸ್ಥಾನಮಾನಕ್ಕೆ ತಕ್ಕ ಸ್ಥಾನ ನೀಡಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. 
 
ಸುಷ್ಮಾ ಸ್ವರಾಜ್, ಮುಖ್ಯ ಖಾತೆಗಳಾದ ಗೃಹ, ರಕ್ಷಣೆ, ವಿದೇಶಾಂಗ ವ್ಯವಹಾರ ಅಥವಾ ಹಣಕಾಸು ಖಾತೆಯ ಆಕಾಂಕ್ಷಿ ಎಂದು ಹೇಳಲಾಗುತ್ತದೆ. 

ವೆಬ್ದುನಿಯಾವನ್ನು ಓದಿ