ಹಿಂದೂಗಳನ್ನು ಒಗ್ಗೂಡಿಸಿ ಮುಸ್ಲಿಂರನ್ನು ವಿಭಜಿಸಿ ಚುನಾವಣೆ ಗೆಲ್ಲುವುದು ಬಿಜೆಪಿ ತಂತ್ರ: ಸುಬ್ರಹ್ಮಣ್ಯಂ ಸ್ವಾಮಿ

ಗುರುವಾರ, 20 ಅಕ್ಟೋಬರ್ 2016 (14:28 IST)
ಹಿಂದೆ ನಮ್ಮ ವಿರುದ್ಧ ಹಿಂದೂಗಳನ್ನು ಒಡೆದು ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸುವ ಸಂಚು ನಡೆದಿತ್ತು. ಇದೀಗ ನಾವು ಮುಸ್ಲಿಮರನ್ನು ಒಡೆದು ಹಿಂದೂಗಳನ್ನು ಒಗ್ಗೂಡಿಸುತ್ತೇವೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
 
ಉತ್ತರಪ್ರದೇಶದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸ್ವಾಮಿ ಹೇಳಿಕೆ ವಿಪಕ್ಷಗಳಿಗೆ ಬ್ರಹ್ಮಾಸ್ತ್ರವನ್ನೇ ಕೊಟ್ಟಂತಾಗಿದೆ.
 
ರಾಮಮಂದಿರ ವಿವಾದವನ್ನು ಇತ್ಯರ್ಥಗೊಳಿಸಿ ಹಿಂದೂಗಳನ್ನು ಒಗ್ಗೂಡಿಸಿ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದು ಶತಸಿದ್ಧ ಎಂದು ಗುಡುಗಿದ್ದಾರೆ.
 
ದೇಶದಲ್ಲಿ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಬಹುದು. ಆದರೆ, ಅದು ಸಾಕಾಗುವುದಿಲ್ಲ.  ಹಿಂದೆ ನಮ್ಮ ವಿರುದ್ಧ ಹಿಂದೂಗಳನ್ನು ಒಡೆದು ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸುವ ಸಂಚು ನಡೆದಿತ್ತು. ಇದೀಗ ನಾವು ಮುಸ್ಲಿಮರನ್ನು ಒಡೆದು ಹಿಂದೂಗಳನ್ನು ಒಗ್ಗೂಡಿಸಿ ಚುನಾವಣೆ ಗೆಲ್ಲುತ್ತೇವೆ ಎಂದರು.
 
ಅಭಿವೃದ್ಧಿಯ ಹರಿಕಾರರಾಗಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಕಾಂಗ್ರೆಸ್ ಮುಖಂಡ ಮೂರಾರ್ಜಿ ದೇಸಾಯಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಉದಾಹರಿಸಿದರು.
 
ಯಾವುದೇ ಚುನಾವಣೆಯಲ್ಲಿ ಗೆಲ್ಲಲು ಭ್ರಷ್ಟಾಚಾರ, ಅಭಿವೃದ್ಧಿ ಮತ್ತು ರಾಮಮಂದಿರ ವಿಷಯಗಳಿಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ತಿಳಿಸಿದ್ದಾರೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ