ಗುಣಮುಖರಾಗುತ್ತಿದ್ದಾರೆ ಜಯಲಲಿತಾ; ಶೀಘ್ರದಲ್ಲಿ ಮನೆಗೆ

ಬುಧವಾರ, 26 ಅಕ್ಟೋಬರ್ 2016 (18:32 IST)
ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎಂದು ಹೇಳಲಾಗುತ್ತಿದೆ. 

ಮುಖ್ಯಮಂತ್ರಿ ಆರೋಗ್ಯ ಚೆನ್ನಾಗಿದ್ದು ಶೀಘ್ರದಲ್ಲಿಯೇ ಅವರು ಮನೆಗೆ ಮರಳಲಿದ್ದಾರೆ ಎಂದು ಎಐಡಿಎಂಕೆ ಮೂಲಗಳು ತಿಳಿಸಿವೆ.
 
ಕಳೆದೊಂದು ವಾರದಿಂದ ಜಯಾ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅಮ್ಮಾ ಶೀಘ್ರ ಗುಣಮುಖರಾಗಲಿ ಎಂದು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೋಮ-ಹವನ, ಪೂಜೆ ಪುನಸ್ಕಾರಗಳನ್ನು ಮುಂದುವರೆಸಿದ್ದಾರೆ. 
 
ಜಯಾ ಅವರು ಚೇತರಿಸಿಕೊಂಡಿದ್ದು, ಸದ್ಯದಲ್ಲಿಯೇ ಮನೆಗೆ ವಾಪಸ್ಸಾಗಲಿದ್ದಾರೆ, ಎಂದು ಪಕ್ಷದ ವಕ್ತಾರೆ ಸಿ.ಆರ್ ಸರಸ್ವತಿ ತಿಳಿಸಿದ್ದು, ಅಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ. 
 
ಜಯಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ ಏಮ್ಸ್ ಮತ್ತು ಸಿಂಗಾಪುರದ ತಜ್ಞ ವೈದ್ಯರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. 
 
ಅಮ್ಮನ ಚೇತರಿಕೆಗಾಗಿ ಪ್ರಾರ್ಥಿಸಿದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಏಮ್ಸ್ ಮತ್ತು ಸಿಂಗಾಪುರದ ತಜ್ಞ ವೈದ್ಯರ ತಂಡಕ್ಕೆ ಸರಸ್ವತಿ ಅವರು ಧನ್ಯವಾದ ಹೇಳಿದ್ದಾರೆ.
 
ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಜಯಲಲಿತಾ ಕಳೆದ ತಿಂಗಳು 22 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ