ರಾಷ್ಟ್ರ ರಾಜಧಾನಿಯ ಫ್ಲಾಟ್ ಒಂದರಲ್ಲಿ ಗುರುವಾರ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿಯ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಕೆಯದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಬಾಲಕಿಯ ಸ್ನೇಹಿತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ನೆರವಾಗಿದ್ದು ತಾನು ಕೂಡ ಅದೇ ಇಬ್ಬರು ಶಂಕಿತ ಆರೋಪಿಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ ಎಂದು ಹೇಳಿದ್ದಾಳೆ.
ಗಾಂಧೀ ನಗರದಲ್ಲಿರುವ ಫ್ಲಾಟ್ ಒಂದರಲ್ಲಿ ಗುರುವಾರ ಬಾಲಕಿ ಶವವಾಗಿ ಪತ್ತೆಯಾಗಿದ್ದಳು. ನಿವಾಸದ ಹೊರಗಡೆಯಿಂದ ಚಿಲಕ ಹಾಕಲಾಗಿತ್ತು. ಕಿಟಕಿ ಮೂಲಕ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ರಕ್ಷಣಾ ದಳದೊಂದಿಗೆ ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ಒಳ ಹೋದಾಗ ಆಘಾತಕಾರಿ ದೃಶ್ಯ ಕಂಡುಬಂದಿತ್ತು.
ಮೃತಳನ್ನು ಅಂಜಲಿ ಎಂದು ಗುರುತಿಸಲಾಗಿದ್ದು ಆಕೆ ತಾಯಿ ಮತ್ತು ಸಹೋದರನ ಜತೆಯಲ್ಲಿ ವಾಸಿಸುತ್ತಿದ್ದಳು. ಆದರೆ ಘಟನೆ ನಡೆದಾಗ ಅವರಿಬ್ಬರು ಮನೆಯಲ್ಲಿರಲಿಲ್ಲ. ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂಜಲಿ ಮನೆಗೆ ಬಂದಿದ್ದಳು. ಬಳಿಕ ಮನೆ ಒಳಗಿನಿಂದ ಹೊಗೆ ಬರಲು ಪ್ರಾರಂಭವಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಿಂದ ಬಾಲಕಿ ಕೊಲೆಯಾಗಿದ್ದು ಸಾಬೀತಾಗಿದೆ.
ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.