ಆರು ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ ₹ 56,984 ಕೋಟಿ ಮೀಸಲಿಟ್ಟ ತೆಲಂಗಾಣ ಸರ್ಕಾರ

Sampriya

ಬುಧವಾರ, 19 ಮಾರ್ಚ್ 2025 (18:05 IST)
Photo Courtesy X
ಹೈದರಾಬಾದ್‌: ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಘೋಷಣೆಗಳು ಕೈಹಿಡದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ತೆಲಂಗಾಣದ ಚುನಾವಣೆಯಲ್ಲೂ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರ ಹಿಡಿದಿತ್ತು. ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದರೆ, ಒಂದು ಹೆಜ್ಜೆ ಮುಂದೆ ಹೋದ ತೆಲಂಗಾಣದ ಕಾಂಗ್ರೆಸ್‌ ಸರ್ಕಾರ ಆರು ಗ್ಯಾರಂಟಿಗಳು ಜಾರಿಗೊಳಿಸಿದೆ.

ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆ, ಗೃಹಜ್ಯೋತಿ, ಅನ್ನಾ ಅಕ್ಕಿ ಬೋನಸ್‌, ರಾಜೀವ್‌ ಆರೋಗ್ಯಶ್ರೀ, ಗ್ಯಾಸ್‌ ಸಿಲಿಂಡರ್‌ ಸಬ್ಸಿಡಿ ಮತ್ತು ಇಂದಿರಮ್ಮ ಆತ್ಮ ಭರೋಸಾ ಯೋಜನೆಗಳನ್ನು ಅಲ್ಲಿನ ಸರ್ಕಾರ ಜಾರಿಗೊಳಿಸಿದೆ. ಇದಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂದಿಸಲು ಸರ್ಕಾರ ಹರಸಾಹಸಪಡುತ್ತಿದೆ.

ತೆಲಂಗಾಣದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಬುಧವಾರ ತೆಲಂಗಾಣದ 2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದರು. ಈ ವರ್ಷದ ಬಜೆಟ್ ಗಾತ್ರ ಮೊದಲ ಬಾರಿಗೆ ₹ 3 ಲಕ್ಷ ಕೋಟಿ ದಾಟಿದೆ.  ಇದೀಗ ತೆಲಂಗಾಣ ಸರ್ಕಾರ ರಾಜ್ಯ ಬಜೆಟ್‌ನಲ್ಲಿ 6 ಗ್ಯಾರಂಟಿ ಯೋಜನೆಗಳಿಗೆ ಒಟ್ಟು ₹ 56,984 ಕೋಟಿ ಮೀಸಲಿರಿಸಿದೆ.

ಗ್ಯಾರಂಟಿ ಯೋಜನೆಗಳ ಪೈಕಿ ಮಹಾಲಕ್ಷ್ಮಿ ಯೋಜನೆಗೆ ₹4,305 ಕೋಟಿ, ಗೃಹ ಜ್ಯೋತಿಗೆ ₹2,080 ಕೋಟಿ, ಸನ್ನಾ ಅಕ್ಕಿ ಬೋನಸ್‌ಗೆ ₹1,800 ಕೋಟಿ, ರಾಜೀವ್ ಆರೋಗ್ಯ ಶ್ರೀ ಯೋಜನೆಗೆ ₹1,143 ಕೋಟಿ, ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ₹723 ಕೋಟಿ ಮತ್ತು ಇಂದಿರಮ್ಮ ಆತ್ಮ ಭರೋಸಾ ಯೋಜನೆಗೆ ₹600 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ