50 ಲಕ್ಷ ಮರ ಬೆಳೆಸುವ ಯೋಜನೆಗೆ ಡ್ರೋಣ್ ಬಳಸಲು ಯೋಜನೆ ರೂಪಿಸಿದ ತೆಲಂಗಾಣ
ಮಂಗಳವಾರ, 31 ಆಗಸ್ಟ್ 2021 (07:27 IST)
ತೆಲಂಗಾಣ ಸರ್ಕಾರವು ಮಾರುತ್ ಡ್ರೋನ್ಸ್ ಎನ್ನುವ ಹೈದರಾಬಾದ್ ಮೂಲದ ಡ್ರೋನ್ ಟೆಕ್ನಾಲಜಿ ಸ್ಟಾರ್ಟ್ಅಪ್ ಕಂಪೆನಿಯ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದು, 'ಹರ ಭರ' ಹೆಸರಿನ ಡ್ರೋನ್ ಆಧಾರಿತ ಅರಣ್ಯೀಕರಣ ಯೋಜನೆಯನ್ನು ಆರಂಭಿಸಿದೆ. ತೆಲಂಗಾಣದ ಎಲ್ಲಾ 33 ಜಿಲ್ಲೆಗಳಲ್ಲಿ 12,000 ಹೆಕ್ಟೇರ್ ಭೂಮಿಯಲ್ಲಿ ರಾಜ್ಯ ಸರ್ಕಾರ 50 ಲಕ್ಷ ಮರಗಳನ್ನು ನೆಡುವ ಮೊದಲ ಪ್ರಯತ್ನ ಇದಾಗಿದೆ.
ಮಾರುತ್ ಡ್ರೋನ್ಸ್ ಕಂಪೆನಿಯು ಬೀಜ ಬಿತ್ತುವ ಕಾಪ್ಟರ್ ಮೂಲಕ ತ್ವರಿತವಾದ ಮರು ಅರಣ್ಯೀಕರಣಕ್ಕೆ ವೈಮಾನಿಕವಾಗಿ ಬಿತ್ತನೆ ಮಾಡಿವ ಕಾರ್ಯಕ್ಕೆ ಈ ಮೂಲಕ ಹೊಸ ಸಾಹಸಕ್ಕೆ ಸರ್ಕಾರ ಕೈ ಹಾಕಿದೆ.
ಇದು ಸಮುದಾಯ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಂಡ, ಸುಸ್ಥಿರ ಮತ್ತು ದೀರ್ಘಕಾಲೀನ ಪರಿಹಾರಕ್ಕಾಗಿ ಮಾಡುತ್ತಿರುವ ಕೆಲಸ. ಇದು ಪರಿಸರ ಹಾನಿಯನ್ನು ಹಿಮ್ಮೆಟ್ಟಿಸುವುದಲ್ಲದೆ, ಗ್ರಾಮೀಣ, ಬುಡಕಟ್ಟು ಮತ್ತು ಇತರ ದುರ್ಬಲ ಸಮುದಾಯಗಳಲ್ಲಿ ಪ್ರಮುಖ ಉದ್ಯೋಗವನ್ನು ಸೃಷ್ಟಿಸುತ್ತದೆ. ಅರಣ್ಯೀಕರಣಕ್ಕಾಗಿ ಬಲವಾದ ಸಮುದಾಯಗಳನ್ನು ನಿರ್ಮಿಸುವುದು ಮತ್ತು ಅರಣ್ಯನಾಶದ ಪರಿಣಾಮಗಳ ಕುರಿತು ತಳಮಟ್ಟದಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತೆಲಂಗಾಣ ಸರ್ಕಾರ ಹೇಳಿದೆ.
ತೆಳುವಾದ ಅರಣ್ಯ ಪ್ರದೇಶ ಹೊಂದಿರುವ, ಬಂಜರು ಮತ್ತು ಖಾಲಿ ಅರಣ್ಯ ಭೂಮಿಯಲ್ಲಿ ಬೀಜದ ಚೆಂಡುಗಳನ್ನು ಡ್ರೋನ್ಗಳ ಮೂಲಕ ಉದುರಿಸಲಾಗುತ್ತದೆ, ಈ ಮೂಲಕ ಮರಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳನ್ನು ಹಚ್ಚ ಹಸಿರಿನ ತಾಣಗಳನ್ನಾಗಿ ಮಾಡುವ ಕೆಲಸ ಇದಾಗಿದೆ.
ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಮತ್ತು ತುರ್ತು ಗಮನ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ಭೂಪ್ರದೇಶದ ಪ್ರದೇಶ ಸಮೀಕ್ಷೆ ಮತ್ತು ಮ್ಯಾಪಿಂಗ್ನೊಂದಿಗೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಮಣ್ಣು, ಹವಾಮಾನ ಮತ್ತು ಇತರ ನಿಯತಾಂಕಗಳ ಆಧಾರದ ಮೇಲೆ ಬಂಜರು ಭೂಮಿಯಲ್ಲಿ ನೆಡಬಹುದಾದ ಮರಗಳ ಸಂಖ್ಯೆ ಮತ್ತು ಜಾತಿಗಳನ್ನು ನಿರ್ಧರಿಸಲು ಡ್ರೋಣ್ ಬಳಸಲಾಗುತ್ತದೆ.