ಅಟ್ಟಪ್ಪಾಡಿ ಕಡುಕ್ ಮಣ್ಣ ಎಂಬಲ್ಲಿನ 27 ವರ್ಷದ ಆದಿವಾಸಿ ಮಧು ಎಂಬ ಯುವಕ ಕಳ್ಳತನ ಮಾಡುತ್ತಿದ್ದ ಎಂದು ಆರೋಪವಿತ್ತು. ಆನಂತರ ನಾಪತ್ತೆಯಾಗಿದ್ದ ಮಧು ಎಂಬ ಈ ಯುವಕನ್ನು ಕಾಡಿನ ಹತ್ತಿರವಿದ್ದ ಒಂದು ಪ್ರದೇಶದಲ್ಲಿ ಅಲ್ಲಿನ ಗ್ರಾಮಸ್ಥರು ಸೆರೆ ಹಿಡಿದಿದ್ದರು. ಕಳ್ಳತನ ಮಾಡಿದ್ದಕ್ಕಾಗಿ ಕೆಲವು ಯುವಕರು ಮಧುವನ್ನು ಕಟ್ಟಿಹಾಕಿ ಅವನ ಮೇಲೆ ಹಲ್ಲೆ ನಡೆಸಿ ಆಮೇಲೆ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಪೊಲೀಸರು ಮಧುವನ್ನು ವಶಕ್ಕೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಯುವಕ ರಕ್ತಕಾರಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಈತನೊಂದಿಗೆ ಕ್ಲಿಕ್ಕಿಸಿಕೊಂಡು ಸೆಲ್ಫಿ ಮತ್ತು ಈತನಿಗೆ ಥಳಿಸುವಾಗ ಮಾಡಿದ ವೀಡಿಯೋವನ್ನು ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕಳ್ಳತನ ಮಾಡಿದ್ದಾನೆ ಎಂಬ ಆರೋಪದಲ್ಲಿ ಮಾನಸಿಕ ಅಸ್ವಸ್ಥನಾದ ಯುವಕನ್ನು ಥಳಿಸಿ ಹತ್ಯೆ ಮಾಡಿದ್ದು ಮಾತ್ರವಲ್ಲದೆ ಆತನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಹಂಕಾರ ಮೆರೆದ ಯುವಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
"ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಾಗಿದೆ. ಏಳು ಆರೋಪಿಗಳನ್ನು ನಾವು ಗುರುತಿಸಿದ್ದೇವೆ, ಆದರೆ ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಮಧುವಿನ ಸಾವಿನ ಕುರಿತು ಮರಣೋತ್ತರ ವರದಿ ಬಂದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಪಾಲಕ್ಕಾಡ್ ಪೊಲೀಸ್ ಪ್ರತೇಶ್ ಕುಮಾರ್ ತಿಳಿಸಿದ್ದಾರೆ.