ಪ್ರಸಕ್ತ ಕಾನೂನು ವ್ಯವಸ್ಥೆ ಸಾಮಾನ್ಯ ಜನರ ಅಗತ್ಯತೆಗೆ ಸೂಕ್ತವಲ್ಲ: ಎನ್.ವಿ. ರಮಣ
ಭಾನುವಾರ, 19 ಸೆಪ್ಟಂಬರ್ 2021 (09:23 IST)
ಬೆಂಗಳೂರು, ಸೆ. 19 : ಪ್ರಸಕ್ತ ಕಾನೂನು ವ್ಯವಸ್ಥೆ ಸಾಮಾನ್ಯ ಜನರ ಅಗತ್ಯತೆಗೆ ಹೊಂದುವುದಿಲ್ಲ. ಅದು ಅವರಿಗೆ ಹಲವು ಅಡೆತಡೆಗಳನ್ನು ಉಂಟು ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಶನಿವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನುಗಳು ವಸಾಹತುಶಾಹಿ ಮೂಲ ಹೊಂದಿವೆ ಎಂದು ಹೇಳಿದ ಅವರು, ನಮ್ಮ ಕಾನೂನು ವ್ಯವಸ್ಥೆಯ ಭಾರತೀಕರಣ ಇಂದಿನ ಅಗತ್ಯ ಎಂದಿದ್ದಾರೆ. ನಮ್ಮ ನ್ಯಾಯ ವಿತರಣೆ ಆಗಾಗ ಸಾಮಾನ್ಯ ಜನರಿಗೆ ಅಡೆತಡೆ ಉಂಟು ಮಾಡುತ್ತದೆ. ನಮ್ಮ ಕಾನೂನು ವ್ಯವಸ್ಥೆ ಸಾಮಾನ್ಯ ಜನರ ಅವಶ್ಯಕತೆಗಳಿಗೆ ಸ್ಪಂದಿಸುವಂತಿರಬೇಕು. ಭಾರತದ ಪ್ರಸಕ್ತ ಕಾರ್ಯನಿರ್ವಹಣಾ ಶೈಲಿ ಭಾರತದ ಸಂಕೀರ್ಣತೆಗೆ ಹೊಂದಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ದೀರ್ಘಕಾಲದ ಅಸೌಖ್ಯದ ಬಳಿಕ ಎಪ್ರಿಲ್ನಲ್ಲಿ ನಿಧನರಾದ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.