ರಾಯ್ಪುರ : ವಿದ್ಯುತ್ ಕಡಿತದಿಂದಾಗಿ 4 ಕಂದಮ್ಮಗಳು ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ಛತ್ತೀಸ್ಗಢದಲ್ಲಿ ನಡೆದಿದೆ.
ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿದ್ದ 4 ನವಜಾತ ಶಿಶುಗಳು ಸೋಮವಾರ ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಅಂಬಿಕಾಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮುಂಜಾನೆ 5:30 ರಿಂದ 8:30ರ ನಡುವೆ ಶಿಶುಗಳ ಸಾವು ಸಂಭವಿಸಿದೆ. ವೆಂಟಿಲೇಟರ್ನಲ್ಲಿದ್ದ ಶಿಶುಗಳೇ ಸಾವನ್ನಪ್ಪಿದ್ದು,
ಇದಕ್ಕೆ ವಿದ್ಯುತ್ ಕಡಿತವೇ ಕಾರಣ ಎಂದು ಮೃತ ಕಂದಮ್ಮಗಳ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಶಿಶುಗಳ ಸಾವಿಗೆ ಹಾಗೂ ವಿದ್ಯುತ್ ಕಡಿತಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಆಡಳಿತ ಸಮರ್ಥಿಸಿಕೊಂಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ 4 ಶಿಶುಗಳು ಮೊದಲೇ ಗಂಭೀರ ಸ್ಥಿತಿಯಲ್ಲಿದ್ದು, ಅವನ್ನು ಎಸ್ಎನ್ಸಿಯುಗೆ ದಾಖಲಿಸಲಾಗಿತ್ತು. ಅದರಲ್ಲಿ 2 ಶಿಶುಗಳು ವೆಂಟಿಲೇಟರ್ ಬೆಂಬಲದಲ್ಲಿದ್ದವು. ಮಧ್ಯರಾತ್ರಿ 1 ಗಂಟೆಯಿಂದ 1:30ರ ವರೆಗೆ ಆಸ್ಪತ್ರೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಆದರೆ ಕೆಲವೇ ಹೊತ್ತಿನಲ್ಲಿ ಅದನ್ನು ಸರಿಪಡಿಸಲಾಗಿದೆ.
ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದರೂ ಅದು ಎಸ್ಎನ್ಸಿಯ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅಲ್ಲಿಗೆ ಪರ್ಯಾಯ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.