ನವದೆಹಲಿ : ಸಬರಮತಿ ಆಶ್ರಮದ ಪುನಾರಾಭಿವೃದ್ದಿಗೆ ನಿರ್ಧರಿಸಿರುವ ಗುಜರಾತ್ ರಾಜ್ಯ ಸರ್ಕಾರ ನಿರ್ಧಾರದ ವಿರುದ್ಧ ಮಹಾತ್ಮಗಾಂಧಿ ಮರಿ ಮೊಮ್ಮಗ ತುಷಾರ್ ಅರುಣ್ ಗಾಂಧಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಆಶ್ರಮದ ಪುನರಾಭಿವೃದ್ದಿಗೆ ಅನುಮತಿ ನೀಡದಂತೆ ಅವರು ಮನವಿ ಮಾಡಿದ್ದಾರೆ. ಅರ್ಜಿ ಸಲ್ಲಿಕೆ ಬಳಿಕ ಇಂದು ಅವರ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಿದರು.
ಮತ್ತು ತುರ್ತು ವರ್ಚುವಲ್ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಈ ಮನವಿ ಆಲಿಸಿದ ಪೀಠ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.
ಸಬರಮತಿ ಆಶ್ರಮ ಒಂದು ಎಕರೆ ವಿಸ್ತೀರ್ಣದಲ್ಲಿದೆ. ಈ ಒಂದು ಎಕರೆ ಸುತ್ತಲಿನ 55 ಎಕರೆ ಭೂಮಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಗುಜರಾತ್ ಸರ್ಕಾರ ಹೊಂದಿದೆ. ಗಾಂಧಿ ಸ್ಪೂರ್ತಿಯ ಭೂಮಿ ಇದಾಗಿದ್ದು ಇದನ್ನು ಅಭಿವೃದ್ಧಿಪಡಿಸುವ ಮೂಲಕ ಗಾಂಧಿ ಬದುಕು, ತತ್ವಗಳು ಮತ್ತು ಜೀವನದ ಧೈಯವನ್ನು ಹರಡುವ ಯೋಜನೆ ಇದಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.