ಪಾಕಿಸ್ತಾನ ಸುಪ್ರೀಂಕೋರ್ಟ್ನ ಪ್ರಥಮ ಜಡ್ಜ್ ಆಗಿ ಆಯೇಶಾ ಮಲ್ಲಿಕ್ ಸೋಮವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಮಹಿಳಾ ಹಕ್ಕುಗಳಿಗೆ ಬೆಲೆಯಲಿಲ್ಲ. ಅದನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪ ಪದೇಪದೆ ಕೇಳಿಬರುತ್ತಿರುವ ಬೆನ್ನಲ್ಲೇ ಆಯೇಶಾ ಮಲ್ಲಿಕ್ ಪ್ರಮಾಣ ವಚನ ಸ್ವೀಕಾರ ಒಂದು ಮಹತ್ವದ ಬೆಳವಣಿಗೆಯಾಗಿದೆ. ಸೋಮವಾರ ಇಸ್ಲಮಬಾದ್ನ ಸುಪ್ರೀಂಕೋರ್ಟ್ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿತ್ತು.
ಅಲ್ಲಿ 16 ಪುರುಷ ನ್ಯಾಯಾಧೀಶರೊಂದಿಗೆ ಕುಳಿತ ಆಯೇಶಾ ಮಲ್ಲಿಕ್, ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದೊಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ. ವಕೀಲ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರಾದ ನಿಘಾತ್ ದಾದ್ ಪ್ರತಿಕ್ರಿಯೆ ನೀಡಿ, ಇದೊಂದು ಮಹತ್ವದ ಹೆಜ್ಜೆ. ಪಾಕಿಸ್ತಾನದ ನ್ಯಾಯಾಂಗ ವಿಭಾಗದಲ್ಲಿ ಒಂದು ಇತಿಹಾಸ ಸೃಷ್ಟಿಯಾದಂತೆ ಆಯಿತು ಎಂದು ಹೇಳಿದ್ದಾರೆ.
ಆಯೇಶಾರನ್ನು ಸುಪ್ರೀಂಕೋರ್ಟ್ಗೆ ನೇಮಕ ಮಾಡಲು ಪಾಕಿಸ್ತಾನ ಬಾರ್ ಕೌನ್ಸಿಲ್ ವಿರೋಧ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಪ್ರತಿಭಟನೆಯನ್ನೂ ಮಾಡಿತ್ತು. ಅವರಿಗಿಂತ ಹಿರಿಯರಾದ ಅನೇಕ ಪುರುಷ ಜಡ್ಜ್ಗಳೇ ಇರುವಾಗ, ಅದು ಹೇಗೆ ಆಯೇಶಾರನ್ನು ಸುಪ್ರಿಂಕೋರ್ಟ್ಗೆ ನೇಮಕ ಮಾಡಲಾಗುತ್ತಿದೆ ಎಂದು ಪ್ರಶ್ನಿಸಲಾಗಿತ್ತು. ಕಳೆದ ನಾಲ್ಕು ತಿಂಗಳಿಂದ ನಡೆದ ವಿವಾದದ ನಡುವೆಯೇ ಆಯೇಶಾ ನೇಮಕಾತಿ ನಡೆದಿದೆ.