ಅಪ್ರಾಪ್ತೆಯ ಕೈ ಹಿಡಿದು ಸುಂದರವಾಗಿವೆ ಅನ್ನೋದು ಲೈಂಗಿಕ ಅಪರಾಧವಲ್ಲ
ಗುರುವಾರ, 2 ಜೂನ್ 2022 (11:34 IST)
ನವದೆಹಲಿ : ಅಪ್ರಾಪ್ತ ಹುಡುಗಿಯ ಕೈ ಹಿಡಿದುಕೊಂಡು ಸುಂದರವಾಗಿವೆ ಎಂದು ಹೇಳಿದರೆ,
ಅದು ಯಾವುದೇ ಲೈಂಗಿಕ ಉದ್ದೇಶದಿಂದ ಕೂಡಿಲ್ಲದೇ ಇದ್ದರೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯನ್ವಯ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲ ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ.
ಕಳೆದ ಮೇ 26ರಂದು ಘಟನೆಗೆ ಸಂಬಂಧಿಸಿದ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಬ್ಲ್ಯೂ. ದಿಯೆಂಗ್ಡೋಹ್, ಅಂತಹ ಪ್ರಕರಣಗಳಲ್ಲಿ ಆರೋಪಿ ಲೈಂಗಿಕ ಉದ್ದೇಶ ಹೊಂದಿಲ್ಲದೆ ಇದ್ದರೆ ಲೈಂಗಿಕ ದೌರ್ಜನ್ಯ ಎಂದು ಹೇಳಲಾಗುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.
ಒಂಬತ್ತು ವರ್ಷದ ಸಂತ್ರಸ್ತ ಬಾಲಕಿಯ ಬಳಿ 55 ವರ್ಷದ ಅಂಗಡಿ ಮಾಲೀಕನೊಬ್ಬ ನೀರು ತರಲು ಕೇಳಿದ್ದಾನೆ. ಹುಡುಗಿ ನೀರು ತಂದುಕೊಟ್ಟಾಗ ಆರೋಪಿಯು ಆಕೆಯ ಕೈ ಹಿಡಿದುಕೊಂಡು ನೇವರಿಸಿದ್ದಾನೆ.
ನಂತರ ಆಕೆಯ ಕೈಗಳು ಸುಂದರವಾಗಿವೆ ಎಂದು ಹೇಳಿದ್ದಾನೆ. ಇದರಿಂದ ಸಂತ್ರಸ್ತೆ ತಕ್ಷಣವೇ ಸ್ಥಳದಿಂದ ತೆರಳಿದ್ದು ತನ್ನ ತಾಯಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ತಾಯಿಯೊಂದಿಗೆ ತೆರಳಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.