ದಿಢೀರ್ ಬೆಳವಣಿಗೆಯಿಂದ ಕಂಗಾಲಾದ ಹೈಕಮಾಂಡ್

ಗುರುವಾರ, 30 ಸೆಪ್ಟಂಬರ್ 2021 (08:46 IST)
ನವದೆಹಲಿ : ಕಾಂಗ್ರೆಸ್ ಪಕ್ಷದಲ್ಲಿ ಅನಿರೀಕ್ಷಿತ ಬೆಳವಣಿಗೆಗಳ ನಡೆಯತೊಡಗಿದ್ದು, ಹೈಕಮಾಂಡ್ ವಿರುದ್ಧವೇ ಜಿ23 ನಾಯಕರು ಕಿಡಿಕಾರಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷಕ್ಕೆ ಚುನಾಯಿತ ಅಧ್ಯಕ್ಷರೇ ಇಲ್ಲ. ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ತಕ್ಷಣವೇ ಕಾರ್ಯಕಾರಿ ಸಮಿತಿ ಸಭೆ ಕರೆಯಬೇಕೆಂದು ಆಗ್ರಹಿಸಿದ್ದಾರೆ. ಈ ಮೂಲಕ ಹಿರಿಯ ನಾಯಕರು ಮತ್ತೆ ಸಿಡಿದೆದ್ದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು ಅವರನ್ನು ಬೆಂಬಲಿಸಿ ಹಲವು ಸಚಿವರು ಮತ್ತು ಪಕ್ಷದ ಪದಾಧಿಕಾರಿಗಳು ರಾಜೀನಾಮೆ ನೀಡಿರುವುದು ಹೈಕಮಾಂಡ್ ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಸಿಧು ಮತ್ತು ಅವರ ಬೆಂಬಲಿಗರ ಮನವೊಲಿಕೆ ಕಸರತ್ತು ಮುಂದುವರೆದಿದೆ.
ಇದರ ನಡುವೆಯೇ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕ್ಯಾ. ಅಮರೀಂದರ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಅವರು ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ.
ಗೋವಾ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಲುಝಿನ್ಹೊಫೆಲಿರೋ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಛತ್ತೀಸ್ ಗಡದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಭೂಪೇಶ್ ಬಘೆಲ್ ಬೆಂಬಲಿಗರು ದೆಹಲಿಗೆ ದೌಡಾಯಿಸಿದ್ದಾರೆ. ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಿಕ್ಕಟ್ಟು ಉಂಟಾಗಿದೆ. ಇವುಗಳ ನಡುವೆ ಜಿ 23 ನಾಯಕರು ಹೈಕಮಾಂಡ್ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ