ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ

ರಾಮಕೃಷ್ಣ ಪುರಾಣಿಕ

ಬುಧವಾರ, 10 ಜನವರಿ 2018 (19:17 IST)
ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯ ಪ್ರಸಾರದ ಕುರಿತಾದ ಕಡ್ಡಾಯ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಆಧರಿಸಿದ ಸುಪ್ರೀಂಕೋರ್ಟ್, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದ್ದ ತನ್ನ ಆದೇಶವನ್ನು ಮಂಗಳವಾರ ಬದಲಾಯಿಸಿದೆ.
ಚಲನಚಿತ್ರ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದು ಐಚ್ಛಿಕ ಎಂದು ಈ ಮೊದಲು ಹೊರಡಿಸಿದ ತೀರ್ಪನ್ನು ಸುಪ್ರೀಂಕೋರ್ಟ್ ಮಾರ್ಪಡಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯ ಪ್ರಸಾರ ಕಡ್ಡಾಯವಲ್ಲ, ರಾಷ್ಟ್ರಗೀತೆಯನ್ನು ಹಾಡುವುದು ಐಚ್ಛಿಕ ವಿಚಾರವಾಗಿದ್ದು, ಈ ಕುರಿತು ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರ ನೇಮಿಸುವ 12 ಸದಸ್ಯರ ಸಮಿತಿಯು ಮುಂದಿನ ಆರು ತಿಂಗಳಲ್ಲಿ ವರದಿ ಸಲ್ಲಿಸಲಿದೆ.
 
ಇನ್ನು ಮುಂದೆ ಚಿತ್ರಮಂದಿರಗಳು ಸ್ವಇಚ್ಛೆಯಿಂದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದ ಪಕ್ಷದಲ್ಲಿ ವೀಕ್ಷಕರು ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಮಂಗಳವಾರ ಸುಪ್ರೀಂಕೋರ್ಟ್ ಹೊರಡಿಸಿದ ಆದೇಶವು ಒಳಗೊಂಡಿತ್ತು.
 
ರಾಷ್ಟ್ರಗೀತೆ ಪ್ರಸಾರದ ಸಮಯದಲ್ಲಿ ಗೌರವ ನೀಡಿಲ್ಲ ಎಂಬ ಕಾರಣಕ್ಕೆ ಹಲವರ ಮೇಲೆ ಚಿತ್ರಮಂದಿರಗಳಲ್ಲಿ ಹಲ್ಲೆಗಳು ನಡೆದಿವೆ. 2016 ರ ನವೆಂಬರ್ ಹೊರಡಿಸಿದ ತೀರ್ಪನ್ನು ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಗೀತೆಯ ಕಡ್ಡಾಯ ಆದೇಶದಲ್ಲಿ ಬದಲಾವಣೆ ಮಾಡುವಂತೆ ಕೋರಿಕೊಂಡಿತ್ತು.
 
ದೇಶದ ಜನತೆಯಲ್ಲಿ ದೇಶಭಕ್ತಿಯನ್ನು ಮೂಡಿಸುವ ಉದ್ದೇಶದಿಂದ ದೇಶದ ಎಲ್ಲ ಚಿತ್ರಮಂದಿರಗಳಲ್ಲಿ ಚಲನಚಿತ್ರ ಆರಂಭದ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು, ಎಲ್ಲ ವೀಕ್ಷಕರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವವನ್ನು ನೀಡಬೇಕು ಎಂದು 2016 ರ ನವೆಂಬರ್ 30 ರಂದು ಆದೇಶ ಹೊರಡಿಸಿತ್ತು ಹಾಗೂ ವಿಕಲಾಂಗರಿಗೆ ವಿನಾಯಿತಿಯನ್ನು ನೀಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ