ಕಳೆದೊಂದು ವರ್ಷದಿಂದ ದೆಹಲಿಯ ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಕೊನೆಗೊಳ್ಳುವ ಸಾಧ್ಯತೆ ಇದೆ.
ವಿವಾದಿತ ಮೂರು ಕೃಷಿ ಮಸೂದೆ ರದ್ಧಾದ ಬಳಿಕವೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದ ರೈತ ಸಂಘಟನೆಗಳು ಕನಿಷ್ಠ ಬೆಂಬಲ ಬೆಲೆ, ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಮುಂದೆ ಇರಿಸಿದ್ದರು.
ಈ ಕುರಿತು ನಿನ್ನೆ ದೆಹಲಿಯಲ್ಲಿ ಸರ್ಕಾರದ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ತಮ್ಮ ಈ ವರ್ಷದ ಹೋರಾಟಕ್ಕೆ ಇಂದು ಅಂತಿಮ ಹಾಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ರೈತರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದ ಹಿನ್ನಲೆ ಅವರು ಈ ತೀರ್ಮಾನ ನಡೆಸಿದ್ದು, ಈ ಬಗ್ಗೆ ಇಂದು ರೈತ ಸಂಘಟನೆ ನಿರ್ಧಾರ ಪ್ರಕಟಿಸಲಿದ್ದು, ನಾಳೆ ಪ್ರತಿಭಟನಾ ಸ್ಥಳಗಳನ್ನು ಬಿಟ್ಟು ಹೊರಡಲಿದ್ದಾರೆ.
ಕೃಷಿ ಕಾನೂನು ಹಿಂಪಡೆಯಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರೈತರ ಮೇಲೆ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ನಂತರ ರೈತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿತು. ಜೊತೆಗೆ ಕೇಂದ್ರ ಸರ್ಕಾರ ಎಸ್ಕೆಎಂ ಅಥವಾ ಇತರೆ ಸಂಬಂಧಿತ ರೈತ ಸಂಘಗಳೊಂದಿಗೆ ಸಮಾಲೋಚಿಸಿದ ನಂತರವೇ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಮಂಡಿಸುವುದಾಗಿ ಭರವಸೆ ನೀಡಿದೆ.