ಭಾರತದ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಪಿರಮಾಲ್ ಅವರು ತಮ್ಮ ಇಬ್ಬರು ಅವಳಿ ಮಕ್ಕಳನ್ನು ಐವಿಎಫ್ (ಇನ್-ವಿಟ್ರೋ ಫರ್ಟಿಲೈಸೇಶನ್) ಮೂಲಕ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.
ಈಚೆಗೆ ಮಾಧ್ಯಮವೊಂದರಲ್ಲಿ ಈ ಬಗ್ಗೆ ಓಪನ್ ಆಗಿ ಮಾತನಾಡಿದ ಇಶಾ ಅಂಬಾನಿ ಅವರು ಐವಿಎಫ್ ಮೂಲಕ ತನ್ನ ಅವಳಿ ಮಕ್ಕಳಾದ ಆದಿಯಾ ಶಕ್ತಿ ಮತ್ತು ಕೃಷ್ಣನನ್ನು ಗರ್ಭಧರಿಸಿರುವ ಪ್ರಯಾಣವನ್ನು ಅವರು ಹಂಚಿಕೊಂಡರು.
ಐವಿಎಫ್ ಮೂಲಕ ಗರ್ಭಧರಿಸಲಾಗಿದೆ ಎಂದು ನಾನು ಓಪನ್ ಆಗಿ ಹೇಳುತ್ತೇನೆ. ಐವಿಎಫ್ ಬಗ್ಗೆ ಯಾರೂ ನಾಚಿಕೆ ಪಡಬಾರದು. ಅದೊಂದು ಕಷ್ಟದ ಪ್ರಕ್ರಿಯೆ. ನೀವು ಅದರ ಮೂಲಕ ಹೋಗುತ್ತಿರುವಾಗ, ದೈಹಿಕವಾಗಿ ದಣಿದಿರುತ್ತೀರಿ ಎಂದು ಇಶಾ ಹೇಳಿದರು.
ಇನ್ನೂ ವಿಶೇಷ ಏನೆಂದರೆ ನೀತಾ ಅಂಬಾನಿ ಅವರು ಕೂಡಾ ಐವಿಎಫ್ ಮೂಲಕ ಇಶಾ ಮತ್ತು ಅವರ ಸಹೋದರ ಆಕಾಶ್ ಅವರನ್ನು ಗರ್ಭಧರಿಸಿದ್ದಾರೆ. ಈ ಬಗ್ಗೆ ನೀತಾ ಅವರು ಈ ಹಿಂದೆ ಮಾತನಾಡಿ ತಾನು ಎಂದಿಗೂ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ಹೇಳಿದಾಗ ತಾನೂ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದೆ ಎಂದು ಹೇಳಿಕೊಂಡಿದ್ದರು.
ನೀತಾ ಅವರು ನೀಡಿದ ಸಂದರ್ಶನದಲ್ಲಿ ಹೀಗೇ ಹೇಳಿದ್ದರು. 23 ನೇ ವಯಸ್ಸಿನಲ್ಲಿ, ನಾನು ಎಂದಿಗೂ ಮಗುವಿಗೆ ಜನ್ಮ ನೀಡುವುದಿಲ್ಲ ಎಂದು ಹೇಳಿದಾಗ ನಾನು ಚೂರುಚೂರಾಗಿ ಹೋಗಿದ್ದೆ. ಆದರೆ, ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಡಾ. ಫಿರೂಜಾ ಪಾರಿಖ್ ಅವರ ಸಹಾಯದಿಂದ ನಾನು ನನ್ನ ಅವಳಿ ಮಕ್ಕಳನ್ನು ಹೊಂದಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದರು.
ಇನ್ನೂ ಗರ್ಭಧಾರಣೆಯಲ್ಲಿ ಸಮಸ್ಯೆಯನ್ನು ಎದುರಿಸಿದಾಗ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಇಶಾ ನಂಬಿದ್ದಾರೆ.
"ಇಂದು ಜಗತ್ತಿನಲ್ಲಿ ಆಧುನಿಕ ತಂತ್ರಜ್ಞಾನವಿದ್ದರೆ, ಮಕ್ಕಳನ್ನು ಹೊಂದಲು ಅದನ್ನು ಏಕೆ ಬಳಸಬಾರದು ಎಂದು ಪ್ರಶ್ನಿಸಿದರು. ಗರ್ಭಧರಿಸಲು ಕಷ್ಟ ಪಡುವ ಮಹಿಳೆಯರು ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಅದನ್ನು ಬೇರೆ ಮಹಿಳೆಯರ ಜತೆ ಹಂಚಿಕೊಂಡಾಗ ನಮಗೆ ಪರಿಹಾರ ಸಿಗುತ್ತದೆ ಎಂದರು.