ಮೂರು ವರ್ಷದ ಮಗುವನ್ನು ಕೊಂದು ವಾಷಿಂಗ್‌ ಮೆಷಿನ್‌ನಲ್ಲಿ ಬಚ್ಚಿಟ್ಟ ನೆರಮನೆಯ ಪಾಪಿ ಮಹಿಳೆ

Sampriya

ಮಂಗಳವಾರ, 10 ಸೆಪ್ಟಂಬರ್ 2024 (15:52 IST)
ಚೆನ್ನೈ: ಮನೆಯೊಂದರ ವಾಷಿಂಗ್ ಮೆಷಿನ್‌ನಲ್ಲಿ ಮೂರು ವರ್ಷದ ಮಗುವಿನ ಶವ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಮ್‌ನಲ್ಲಿ ನಡೆದಿದೆ.

ಮಗು ಸಂಜಯ್‌ನನ್ನು ಹತ್ಯೆ ಮಾಡಿ ಮೃತದೇಹವನ್ನು ವಾಷಿಂಗ್ ಮೆಷಿನ್‌ನಲ್ಲಿ ಬಚ್ಚಿಟ್ಟಿದ್ದಾಗಿ ನೆರೆಮನೆಯ 40 ವರ್ಷದ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗನವಾಡಿಗೆ ತೆರಳುವ ಮುನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಸೋಮವಾರ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಪೋಷಕರು, ನೆರೆಹೊರೆಯವರ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಎರಡು ಮನೆಯವರ ನಡುವೆ ಹಲವು ವರ್ಷಗಳಿಂದ ಭೂಮಿ ವಿವಾದ ಇತ್ತು. ಮಗು ನಾಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿ ಮನೆಯಲ್ಲಿ ಹುಡುಕಾಟ ನಡೆಸುವ ವೇಳೆ ವಾಷಿಂಗ್ ಮೆಷಿನ್‌ನಲ್ಲಿ ಸಂಜಯ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಆರೋಪಿ ಮಹಿಳೆಯ ಮಗ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಇದರಿಂದ ಮಾನಸಿಕವಾಗಿ ನೊಂದಿದ್ದ ಆಕೆಯು, ನೆರೆಮನೆಯ ಬಾಲಕನು ಜೀವಂತವಾಗಿ ಇರಬಾರದು ಎಂದು ಭಾವಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ