ಲಕ್ನೋ : ಪ್ರಸಿದ್ಧ ಬ್ರಾಂಡ್ನ ಸುಮಾರು 17 ಲಕ್ಷ ಮೌಲ್ಯದ ಚಾಕ್ಲೆಟ್ ಬಾರ್ಗಳನ್ನು ಖದೀಮರು ರಾತ್ರೋರಾತ್ರಿ ಗೋಡಾನ್ನಿಂದ ಕದ್ದು ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಲಕ್ನೋದ ಚಿನ್ ಹಾಟ್ ಪ್ರದೇಶದಲ್ಲಿ ನಡೆದಿದೆ. ಈ ಚಾಕ್ಲೆಟ್ ಗೋಡಾನ್ ಬಹುರಾಷ್ಟ್ರೀಯ ಚಾಕ್ಲೇಟ್ ವಿತರಕರಾಗಿರುವ ಉದ್ಯಮಿ ರಾಜೇಂದ್ರ ಸಿಂಗ್ ಸಿಧು ಅವರಿಗೆ ಸೇರಿದ್ದಾಗಿದೆ.
ಕಳ್ಳರು ಸುಮಾರು 150 ಕಾರ್ಟನ್ (ಬಾಕ್ಸ್) ಚಾಕ್ಲೇಟ್ ಬಾರ್ ಗಳ ಜೊತೆಗೆ ಕೆಲವು ಬಿಸ್ಕೆಟ್ ಬಾಕ್ಸ್ ಗಳನ್ನು ಕೂಡ ಕದ್ದಿದ್ದಾರೆ. ಈ ಸಂಬಂಧ ಸಿಧು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಅದರಲ್ಲಿ ತಾನು ಇತ್ತೀಚೆಗೆ ಚಿನ್ಹಟ್ನಲ್ಲಿರುವ ತಮ್ಮ ಹಳೆಯ ಮನೆಯಿಂದ ಗೋಮತಿ ನಗರದ ವಿಭೂತಿ ಖಂಡ್ನಲ್ಲಿರುವ ಅಪಾರ್ಟ್ಮೆಂಟ್ಗೆ ಸ್ಥಳಾಂತರಗೊಂಡಿರುವುದಾಗಿ ತಿಳಿಸಿದ್ದಾರೆ.
ತನ್ನ ಹಳೆಯ ಮನೆಯನ್ನು ಚಾಕ್ಲೇಟ್ ವಿರತಣೆಯ ಗೋಡಾನ್ ಆಗಿ ಪರಿವರ್ತನೆ ಮಾಡಿದ್ದೇನೆ. ಮಂಗಳವಾರ ಸ್ಥಳೀಯರು ಕರೆ ಮಾಡಿ, ಗೋಡಾನ್ ಬಾಗಿಲು ಒಡೆದು ಯಾರೋ ಒಳಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆ ಕೂಡಲೇ ನಾನು ಸ್ಥಳಕ್ಕೆ ತೆರಳಿದೆ. ಈ ವೇಳೆ ಇಡೀ ಗೋಡಾನ್ ಖಾಲಿಯಾಗಿರುವುದನ್ನು ನೋಡಿ ದಂಗಾದೆ. ಇನ್ನೊಂದು ವಿಚಾರ ಅಂದ್ರೆ ಕಳ್ಳರು ಬರೀ ಚಾಕ್ಲೇಟ್ ಮಾತ್ರವಲ್ಲದೆ ಸಿಸಿಟಿವಿ ವೀಡಿಯೋ ರೆಕಾರ್ಡರ್ ಕೂಡ ಹೊತ್ತೊಯ್ದಿದ್ದಾರೆ ಎಂದು ಸಿಧು ಪೊಲೀಸರ ಬಳಿ ಹೇಳಿದ್ದಾರೆ.