ನವದೆಹಲಿ : ನಾಲ್ವರು ರೈತರು ಸೇರಿ 8 ಮಂದಿ ಸಾವಿಗೀಡಾದ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ರೈತರ ಮೇಲೆ 'ವ್ಯವಸ್ಥಿತ ದಾಳಿ'ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಂಸಾಚಾರ ನಡೆದ ಲಖಿಂಪುರಕ್ಕೆ ಕಾಂಗ್ರೆಸ್ ನಿಯೋಗದ ಭೇಟಿಗೆ ಯೋಗಿ ಆದಿತ್ಯನಾಥ್ ಸರ್ಕಾರ ನಿರಾಕರಿಸಿದ ಬೆನ್ನಲ್ಲೇ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರೈತರನ್ನ ವ್ಯವಸ್ಥಿತವಾಗಿ ಕೊಲೆ ಮಾಡಲಾಗುತ್ತಿದೆ. ಇವತ್ತು ನಾವು ಎರಡು ಮುಖ್ಯಮಂತ್ರಿಗಳೊಂದಿಗೆ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಲು ಪ್ರಯತ್ನಿಸುತ್ತಿದ್ದೇವೆ. ಆದರೆ 144 ಸೆಕ್ಷನ್ ಹೇರಿ ಕೇವಲ ಮೂರು ಜನರಿಗೆ ಮಾತ್ರ ಅವಕಾಶ ನೀಡಿದ್ದಾರೆ. ನಾವೀಗ ಅಲ್ಲಿಗೆ ಹೋಗುತ್ತಿದ್ದೇವೆ. ನಾವು ಅಲ್ಲಿಗೆ ಹೋಗಿ ರೈತರಿಗೆ ಬೆಂಬಲ ಸೂಚಿಸುತ್ತೇವೆ. ಯಾಕೆ ಉತ್ತರ ಪ್ರದೇಶ ಸರ್ಕಾರ, ಕಾಂಗ್ರೆಸ್ ನಿಯೋಗ ಅಲ್ಲಿಗೆ ಹೋಗಲು ಬಿಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಪ್ರಿಯಾಂಕ ಗಾಂಧಿ ಬಂಧಿಸಿರುವ ಕುರಿತು ಮಾತನಾಡಿ..ರೈತರ ಬಗ್ಗೆ ಧ್ವನಿ ಎತ್ತಿದ ಪ್ರಿಯಾಂಕರನ್ನೂ ಬಂಧಿಸಿದ್ದಾರೆ. ಅವರು ರೈತರ ಸಮಸ್ಯೆಯ ಪ್ರಶ್ನೆಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ನಾವು ಮ್ಯಾನ್ ಹ್ಯಾಂಡ್ಲಿಂಗ್ನಿಂದ ಪ್ರಭಾವಿತರಾಗಿಲ್ಲ. ಇಲ್ಲಿ ರೈತರನ್ನು ಕೊಲ್ಲಲಾಗುತ್ತಿದೆ. ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಇದೆ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.