ಉತ್ತರ ಪ್ರದೇಶದಲ್ಲಿ ರಾಮ ರಾಜ್ಯವಿಲ್ಲ,ಕೊಲೆಗಡುಕ ಸರ್ಕಾರವಿದೆ: ಮಮತಾ ಬ್ಯಾನರ್ಜಿ
ಮಂಗಳವಾರ, 5 ಅಕ್ಟೋಬರ್ 2021 (11:40 IST)
ಕೋಲ್ಕತ್ತ : ದೇಶದಲ್ಲಿ ನಿರಂಕುಶ ಪ್ರಭುತ್ವ ಅಸ್ತಿತ್ವದಲ್ಲಿದ್ದು, ಉತ್ತರ ಪ್ರದೇಶದಲ್ಲಿ ಕೊಲೆಗಡುಕ ಸರ್ಕಾರವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಲಖಿಂಪುರ ಖೇರಿ ಘಟನೆಯನ್ನು ಉಲ್ಲೇಖಿಸಿದ ಅವರು, 'ದೇಶದಲ್ಲಿ ಇಂದು ನಡೆಯುತ್ತಿರುವ ಘಟನೆಗಳು ಪ್ರಜಾಪ್ರಭುತ್ವವನ್ನು ಬಿಂಬಿಸುತ್ತಿಲ್ಲ. ಬದಲಿಗೆ ನಿರಂಕುಶ ಪ್ರಭುತ್ವ ಇರುವುದನ್ನು ಸಾಬೀತುಪಡಿಸಿವೆ. ಸತ್ಯಾಂಶ ಜನರಿಗೆ ತಿಳಿಯುವುದು ಅವರಿಗೆ (ಬಿಜೆಪಿ) ಬೇಕಿಲ್ಲ. ಅದಕ್ಕಾಗಿಯೇ ಅವರು ಅಲ್ಲಿ ಸೆಕ್ಷನ್ 144 ಹೇರಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ಮೇಲೆ (ಬಿಜೆಪಿ) ಜನರೇ ಸೆಕ್ಷನ್ 144 ಹೇರಬೇಕಿದೆ. ಅವರು ಸ್ಥಳೀಯರನ್ನು ಭೇಟಿ ಮಾಡದಂತೆ ನಿಯೋಗಗಳನ್ನು ತಡೆಯುತ್ತಿದ್ದಾರೆ' ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ರಾಮ ರಾಜ್ಯವಿಲ್ಲ. ಕೊಲೆಗಡುಕ ಸರ್ಕಾರವಿದೆ ಎಂದಿದ್ದಾರೆ.