ಮುಂಬೈ : ಹಾವು ಎಂದರೆ ಮನುಷ್ಯರಿಗೆ ಭಯ. ಯಾವುದೇ ಹಾವು ನಮಗೆ ಮುಖಾಮುಖಿಯಾದರೆ ಭಯಪಡುತ್ತೇವೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ವೀಡಿಯೋವೊಂದು ಹರಿದಾಡುತ್ತಿದ್ದು, ವಧು-ವರ ತಮ್ಮ ಮದುವೆಯ ಸಂದರ್ಭದಲ್ಲಿ ಹಾವಿನ ಹಾರವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ವೀಡಿಯೋವನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ವಧು-ವರರು ಹಾವಿನ ಹಾರವನ್ನು ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ.
ಈ ವೀಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಟ್ರೋಲ್ಗೆ ಗುರಿಯಾಗುತ್ತಿದೆ.
ವಧು-ವರ ಬಿಳಿ ಬಟ್ಟೆಯನ್ನೂ ಧರಿಸಿದ್ದು, ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಹಾವನ್ನು ನೋಡಿ ಅವರಿಗೆ ಯಾವುದೇ ರೀತಿಯ ಭಯವು ಆಗುತ್ತಿಲ್ಲ. ಒಬ್ಬರಿಗೊಬ್ಬರು ಹೂವಿನ ಹಾರದ ರೀತಿಯಲ್ಲಿ ಹಾವನ್ನು ಬದಲಾಯಿಸಿಕೊಳ್ಳುತ್ತಿರುವುದನ್ನು ಗಮನಿಸಬಹುದು.
ವಧು ಮೊದಲು ವರನ ಕುತ್ತಿಗೆಗೆ ದೊಡ್ಡ ಹಾವನ್ನು ಹಾಕುತ್ತಾಳೆ, ನಂತರ ದಂಪತಿ ಫೋಟೋಗೆ ಪೋಸ್ ನೀಡುತ್ತಾರೆ. ವರನ ಸರದಿ ಬಂದಾಗ, ಅವನು ದೊಡ್ಡ ಹೆಬ್ಬಾವನ್ನು ತಂದು ವಧುವಿನ ಕುತ್ತಿಗೆಗೆ ಹಾಕುತ್ತಾನೆ. ಈ ಮದುವೆಯಲ್ಲಿ ಪಾಲ್ಗೊಳ್ಳಲು ಅಪಾರ ಜನರು ಬಂದಿದ್ದರು. ಈ ಸುದ್ದಿಯ ವಿಶೇಷತೆ ಎಂದರೆ, ಇಬ್ಬರು ಸ್ಥಳೀಯ ವನ್ಯಜೀವಿ ಇಲಾಖೆ ನೌಕರರಾಗಿದ್ದಾರೆ. ಅವರು ರಾಜ್ಯದ ದೂರದ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ.