ನವದೆಹಲಿ : ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ(ಎಎಸ್ಐ) ಕೇಂದ್ರ ಸಂಸ್ಕೃತಿ ಸಚಿವಾಲಯ ಆದೇಶಿಸಿದೆ ಎಂಬ ವರದಿ ಹೊರಬಂದಿತ್ತು.
ಆದರೆ ಈ ಬಗ್ಗೆ ಸಂಸ್ಕೃತಿ ಸಚಿವರೇ ಅಂತಹ ನಿರ್ದೇಶನ ನೀಡಲಾಗಿಲ್ಲ ಎಂದಿದ್ದಾರೆ. ಕುತುಬ್ ಮಿನಾರ್ ಸಂಕೀರ್ಣದ ಉತ್ಖನನದ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ, ಅಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ.
ಉತ್ಖನನ ನಡೆಸುವಂತೆ ಎಎಸ್ಐಗೆ ಯಾವುದೇ ನಿರ್ದೇಶನ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುತುಬ್ ಮಿನಾರ್ ವಿವಾದ ಪ್ರಸ್ತುತ ಜ್ಞಾನವಾಪಿ ಮಸೀದಿ ವಿವಾದಕ್ಕೆ ಹೋಲಿಕೆಯಾಗುತ್ತದೆ. ಕುತುಬ್ ಮಿನಾರ್ ಅನ್ನು ಕುತುಬ್ ಅಲ್-ದೀನ್ ಐಬಕ್ ನಿರ್ಮಿಸಿಲ್ಲ.
ಬದಲಾಗಿ ಹಿಂದೂ ಚಕ್ರವರ್ತಿ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ್ದಾರೆ ಎಂದು ಎಎಸ್ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಹೇಳಿಕೆ ನೀಡಿದ್ದರು.
ರಾಜಾ ವಿಕ್ರಮಾದಿತ್ಯ ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ಕುತುಬ್ ಮಿನಾರ್ ಅನ್ನು ನಿರ್ಮಿಸಿದ್ದಾರೆ. ಇದು ಹತ್ತಿರದಲ್ಲಿರುವ ಮಸೀದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
ಇದು ಸ್ವತಂತ್ರ್ಯ ರಚನೆ ಎಂದು ತಿಳಿಸಿದ್ದರು. ಕುತುಬ್ ಮಿನಾರ್ ಅನ್ನು ಹಿಂದೂ ರಾಜ ನಿರ್ಮಿಸಿರುವುದಾಗಿ ಹೇಳಿಕೆ ನೀಡಿದ ಬಳಿಕ ವಿವಾದ ಭುಗಿಲೆದ್ದಿದೆ.
ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಂಡುಬಂದಿವೆ ಎನ್ನಲಾಗಿದೆ. ಶನಿವಾರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್, 3 ಇತಿಹಾಸಕಾರರು, 4 ಎಎಸ್ಐ ಅಧಿಕಾರಿಗಳು ಹಾಗೂ ಸಂಶೋಧಕರು ಸ್ಥಳಕ್ಕೆ ಭೇಟಿ ನೀಡಿದ್ದರು.
1991ರಿಂದ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ಕಾರ್ಯ ನಡೆದಿಲ್ಲ ಎಂದು ಎಎಸ್ಐ ಅಧಿಕಾರಿಗಳು ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.