Tirupati Stampedes: ತಿರುಪತಿ ಕಾಲ್ತುಳಿತ ದುರಂತಕ್ಕೆ ಮೂಲ ಕಾರಣ ಯಾರು

Krishnaveni K

ಗುರುವಾರ, 9 ಜನವರಿ 2025 (09:38 IST)
Photo Credit: X
ತಿರುಪತಿ: ವೈಕುಂಠ ಏಕಾದಶಿಯ ಟಿಕೆಟ್ ಖರೀದಿಗೆ ನೂಕುನುಗ್ಗಲು ಉಂಟಾಗಿ ತಿರುಪತಿಯಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 7 ಕ್ಕೇರಿದೆ. ಈಗ ಈ ಅನಾಹುತಕ್ಕೆ ಕಾರಣ ಯಾರು ಎಂಬ ಪ್ರಶ್ನೆ ಮೂಡಿದೆ.

ವೈಕುಂಠ ಏಕಾದಶಿ ಸಂದರ್ಭದಲ್ಲಿ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸಲು ನಿನ್ನೆ ಸೇವಾ ಕೌಂಟರ್ ತೆರೆಯಲಾಗಿದೆ. ಈ ವೇಳೆ ಏಕಾಏಕಿ ಹಲವು ಭಕ್ತರು ನುಗ್ಗಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದರೆ 20 ಮಂದಿ ಸ್ಥಿತಿ ಗಂಭೀರವಾಗಿದೆ.

ದುರಂತಕ್ಕೆ ಯಾರು ಹೊಣೆ?
ವೈಕುಂಠ ಏಕಾದಶಿ ನಿಮಿತ್ತ ಗುರುವಾರ ಬೆಳಿಗ್ಗೆ 5 ಗಂಟೆಯಿಂದ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ ವಿತರಿಸಲಾಗುವುದು ಎಂದು ಟಿಟಿಡಿ ಪ್ರಕಟಿಸಿತ್ತು. ಜನವರಿ 10, 11, ಮತ್ತು 12 ರಂದು ವೈಕುಂಠ ದ್ವಾರ ದರ್ಶನವಿರಲಿದೆ. ಒಂದು ದಿನಕ್ಕೆ 40 ಸಾವಿರದಂತೆ 1 ಲಕ್ಷದ 20 ಸಾವಿರ ಟಿಕೆಟ್ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ 9 ಕಡೆಗಳಲ್ಲಿ 90 ಸೇವಾ ಕೌಂಟರ್ ತೆರೆದಿತ್ತು.

ಆದರೆ ಟಿಕೆಟ್ ಖರೀದಿಗಾಗಿ ನಿನ್ನೆ ಸಂಜೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಹೀಗಾಗಿ ನಿನ್ನೆಯಿಂದಲೇ ಟಿಕೆಟ್ ವಿತರಿಸಲು ಟಿಟಿಡಿ ಮುಂದಾಯಿತು. ಆದರೆ ಭೈರಾಗಿಪಟ್ಟೇಡ ರಾಮ ನಾಯ್ಡು ಶಾಲೆಯ ಬಳಿ ಸರತಿಯಲ್ಲಿ ನಿಂತಿದ್ದ ಓರ್ವರಿಗೆ ಉಸಿರಾಟದ ಸಮಸ್ಯೆ ಎದುರಾಯಿತು.

ಹೀಗಾಗಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಭದ್ರತಾ ಸಿಬ್ಬಂದಿ ಗೇಟ್ ತೆರೆದಿದ್ದಾರೆ. ಗೇಟ್ ತೆರೆದ ಹಿನ್ನಲೆಯಲ್ಲಿ ಟಿಕೆಟ್ ಖರೀದಿಗೆ ಗೇಟ್ ತೆರೆಯಲಾಗಿದೆ ಎಂದು ತಪ್ಪಾಗಿ ತಿಳಿದು ಜನ ಏಕಾ ಏಕಿ ಮುನ್ನುಗ್ಗಿದ್ದಾರೆ. ಈ ನೂಕುನುಗ್ಗಲಿನಲ್ಲಿ ಕೆಲವರು ಕೆಳಗೆ ಬಿದ್ದಿದ್ದಾರೆ. ಬಿದ್ದವರನ್ನು ತುಳಿದುಕೊಂಡೇ ಹಲವರು ಮುನ್ನಡೆದಿದ್ದಾರೆ. ಇದರಿಂದಾಗಿ ಈ ಸರಣಿ ಸಾವು ಸಂಭವಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ