ತಿರುಮಲ: ತಿರುಮಲ ಕ್ಷೇತ್ರದ ಪಾವಿತ್ರ್ಯತೆ ಮತ್ತು ಆಧ್ಯಾತ್ಮಿಕ ಶಾಂತಿ ಕಾಪಾಡುವ ಉದ್ದೇಶದಿಂದ ರಾಜಕೀಯ ಮತ್ತು ದ್ವೇಷದ ಭಾಷಣ ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಹೇಳಿದೆ.
ಸದಾ ಗೋವಿಂದ ನಾಮಸ್ಮರಣೆ ಮೊಳಗುವ ಪವಿತ್ರ ತಿರುಮಲ ದೈವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರು ಸೇರಿದಂತೆ ಕೆಲವರು ದೇವರ ದರ್ಶನ ಪಡೆದ ಬಳಿಕ ದೇವಸ್ಥಾನದ ಎದುರು ಮಾಧ್ಯಮಗಳ ಮುಂದೆ ರಾಜಕೀಯ ದ್ವೇಷದ ಹೇಳಿಕೆ ನೀಡುವುದು ಮತ್ತು ಆಧ್ಯಾತ್ಮಿಕತೆಗೆ ಧಕ್ಕೆ ಉಂಟು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಟಿಟಿಡಿ ಹೇಳಿದೆ.
ಈ ನಿರ್ಧಾರಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡುತ್ತೇವೆ. ಹಾಗೆಯೇ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಟಿಟಿಡಿ ಎಚ್ಚರಿಕೆ ನೀಡಿದೆ.
ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿರಬೇಕು ಎಂದು ಪ್ರತಿಪಾದಿಸಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ನೂತನ ಅಧ್ಯಕ್ಷ ಬಿ.ಆರ್. ನಾಯ್ಡು ಅವರು, ಇದಕ್ಕಾಗಿ ನಾನು ಕಾರ್ಯ ನಿರ್ವಹಿಸುತ್ತೇನೆ ಎಂದು ಈಚೆಗೆ ತಿಳಿಸಿದ್ದರು.
ಇತರ ಧರ್ಮಕ್ಕೆ ಸೇರಿದ ಸಿಬ್ಬಂದಿ ಕುರಿತು ಆಂಧ್ರಪ್ರದೇಶ ಸರ್ಕಾರದ ಜತೆ ಚರ್ಚಿಸಲಾಗುವುದು. ಈ ಸಿಬ್ಬಂದಿಯನ್ನು ಸರ್ಕಾರದ ಇತರ ಇಲಾಖೆಗಳಿಗೆ ನಿಯುಕ್ತಿಗೊಳಿಸುವ ಅಥವಾ ಸ್ವಯಂ ನಿವೃತ್ತಿಗೆ (ವಿಆರ್‌ಎಸ್) ಅವಕಾಶ ಕಲ್ಪಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದು ಅವರು ಹೇಳಿದ್ದರು.