ಕೂಡಿ ಕಳೆವ ಲೆಕ್ಕಾಚಾರದಲ್ಲಿ ಬಿಜೆಪಿ ಬಲೆಗೆ ಬಿದ್ದ ತ್ರಿಮೂರ್ತಿಗಳು!

ಶನಿವಾರ, 5 ನವೆಂಬರ್ 2016 (10:21 IST)
ಬೆಂಗಳೂರು: ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದು ಸಾಕಷ್ಟು ಆರೋಪ ಹೊತ್ತು, ಕೊನೆಗೆ ಜನತಾ ಪ್ರಭುವಿನ ಆಕ್ರೋಶಕ್ಕೆ ತುತ್ತಾಗಿ ಕಾಂಗ್ರೆಸ್ ಗೆ ಅಧಿಕಾರ ಬಿಟ್ಟುಕೊಟ್ಟ ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ರಣತಂತ್ರ ರೂಪಿಸುತ್ತಿದೆ.
 
ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆನ್ನುವ ಮಹದಾಶಯ ಇಟ್ಟುಕೊಂಡ ಬಿಜೆಪಿ, ಮೊದಲ ಹಂತದಲ್ಲಿ ಪ್ರಮುಖ ಮೂವರಿಗೆ ಬಲೆ ಬೀಸಿದೆ.
 
ಇತ್ತೀಚೆಗಷ್ಟೆ ಕಾಂಗ್ರೆಸ್ ಸದಸ್ಯತ್ವಕ್ಕೆ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ವಿರುದ್ಧ ರಣಕಹಳೆ ಊದಿದ ಮೈಸೂರು ಭಾಗದ ಪ್ರಭಾವಿ ದಲಿತ ಮುಖಂಡ ವಿ. ಶ್ರೀನಿವಾಸ್ ಪ್ರಸಾದ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯದ ಪ್ರಭಾವಿ ನಾಯಕ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರಲು ಮುಂದಾಗಿದ್ದಾರೆ. 27ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಇವರಿಗೆ ವೇದಿಕೆ ಕಲ್ಪಿಸಲಾಗಿದ್ದು, ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಕೆಲವು ರಾಷ್ಟ್ರೀಯ ಮುಖಂಡರು ಆ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿಗ್ಗಜರ ಸಮ್ನುಖದಲ್ಲಿ ಈ ಮೂವರು ಮುಖಂಡರು ಕೇಸರಿ ಪಡೆಯ ಕಮಲವನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.
 
ಕುಂದಾಪುರದ ಹಾಲಿ ಶಾಸಕ ಹಾಲಾಡಿ ಜಯರಾಮ ಶೆಟ್ಟಿ, ಈ ಹಿಂದೆ ಬಿಜೆಪಿಯಿಂದಲೇ ಸತತ ಮೂರು ಬಾರಿ ಆಯ್ಕೆಯಾಗಿದ್ದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿ ಹೋಯಿತೆಂದು ಅಸಮಾಧಾನಗೊಂಡು ಪಕದಿಂದ ಹೊರನಡೆದಿದ್ದರು. ತನ್ನ ಸಾಮರ್ಥ್ಯವೇನೆಂದು ತೋರಿಸಿಕೊಳ್ಳಲು ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇವರನ್ನು ಮತ್ತೆ ಮಾತೃ ಪಕ್ಷಕಕ್ಕೆ ಕರೆತಂದು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷರಾದ ಸ್ವತಃ ಯಡಿಯೂರಪ್ಪರೇ ವಿಶೇಷ ಮುತುವರ್ಜಿ ವಹಿಸಿ, ಅವರ ಮನವೊಲಿಸಿದ್ದಾರೆ. ಹಾಲಾಡಿಯವರು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
 
ಸಿಎಂ ಸಿದ್ದರಾಮಯ್ಯ ತಮ್ಮವರಾಜಕೀಯ ಸ್ವಾರ್ಥಕ್ಕಾಗಿ ತನ್ನನ್ನು ವಿನಾಕಾರಣ ಸಂಪುಟದಿಂದ ಕೈಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೇ ರಾಜೀನಾಮೆ ನೀಡಿ ಹೊರಬಂದಿರುವ ದಲಿತ ಮುಖಂಡ ವಿ. ಶ್ರೀನಿವಾಸ ಪ್ರಸಾದ ಕೂಡಾ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಅವರು ಸಿದ್ಧರಾಮಯ್ಯ ವಿರುದ್ದ ತೊಡೆ ತಟ್ಟಿ ಉಪಚುನಾವಣಾ ಮಹಾ ಸಮರಕ್ಕೆ ಸಜ್ಜಾಗಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಅತ್ಯಂತ ಪ್ರಭಾವಿ ದಲಿತ ಮುಖಂಡರಾಗಿರುವ ಶ್ರೀನಿವಾಸ್ ಪ್ರಸಾದ್ ಅವರನ್ನು ಪಕ್ಷಕ್ಕೆ ಕರೆತರಬೇಕೆಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಥಳೀಯ ನಾಯಕರಿಗೆ ಸೂಚಿಸಿದ್ದರು. ಸಂಬಂಧಿಸಿ ಬಿಜೆಪಿಯ ಎಲ್ಲ ನಾಯಕರು ಅವರ ಜೊತೆ ಮಾತುಕತೆ ನಡೆಸಿ, ಪಕ್ಷಕ್ಕೆ ಆಗಮಿಸುವಂತೆ ವಿನಂತಿಸಿದ್ದಾರೆ. ಈ ಮಾತುಕತೆಗಳೆಲ್ಲ ಬಹುತೇಕ ಫಲಪ್ರದವಾಗಿದ್ದು, 27 ರ ಸಮಾವೇಶದಲ್ಲಿ ಅಧಿಕೃತವಾಗಿ ಬಿಜೆಪಿಯನ್ನು ಪ್ರಸಾದ್ ಸೇರಿಕೊಳ್ಳಲಿದ್ದಾರೆ. ದಲಿತ ವಿರೋಧಿ ಬಿಜೆಪಿ ಎನ್ನುವ ಹಣೆಪಟ್ಟಯಿಂದ ದೂರ ಸರಿಯಲು ಬಿಜೆಪಿಗೆ ಇದು ಪ್ಲಸ್ ಪಾಯಿಂಟ್ ಆಗಲಿದೆ.
 
ಕಾಂಗ್ರೆಸ್‍ನಿಂದಲೇ ಉಡುಪಿ, ಚಿಕ್ಕಮಗಳೂರು ಸಂಸದರಾಗಿ, ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಉತ್ತಮ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರಲು ಮುಂದಾಗಿದ್ದಾರೆ. ಈ ಹಿಂದೆ ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ಸಂಸದರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿ ಸೇರಲು ಜಯಪ್ರಕಾಶ್ ಹೆಗ್ಡೆ  ಎನ್ನಲಾಗುತ್ತಿದೆ.
 
ಬೆಂಗಳೂರಿನಲ್ಲಿ 27ರಂದು ನಡೆಯಲಿರುವ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶಕ್ಕೆ ಮೈಸೂರು ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ದಲಿತ ಮತ್ತು ಹಿಂದುಳಿದ  ಸಮುದಾಯದ 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸುವಲ್ಲಿ ಬಿಜೆಪಿ ನಿರತವಾಗಿದೆ. ಆ ಮೂಲಕ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿ ಚುನಾವಣೆ ತಯಾರಿಗೆ ಮುನ್ನುಡಿ ಬರೆಯಲು ಹೊರಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ