ತ್ರಿವಳಿ ತಲಾಖ್: ಬೇಸಿಗೆ ರಜೆಯಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಸಂವಿಧಾನ ಪೀಠ

ಗುರುವಾರ, 30 ಮಾರ್ಚ್ 2017 (16:54 IST)
ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ವಿಚ್ಛೇದನಾ ನೀಡಲು ಬಳಸುವ ತ್ರಿವಳಿ ತಲಾಖ್ ಕಾನೂನಾತ್ಮಕತೆ ಕುರಿತ ಅರ್ಜಿಯನ್ನ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದ್ದು, ಬೇಸಿಗೆ ರಜೆ ಸಂದರ್ಭ ಈ ಅರ್ಜಿಗಳ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಹೇಳಿದ್ಧಾರೆ.
 

ತ್ರಿವಳಿ ತಲಾಖ್, ನಿಕಾಹ್ ಹಲಾಲ್ ಮತ್ತು ಬಹುಪತ್ನಿತ್ವ ಕುರಿತ ಮೂರು ವಿವಾದಗಳ ಕುರಿತಂತೆ 3 ಸಂವಿಧಾನ ಪೀಠಗಳು ವಿಚಾರಣೆ ನಡೆಸಲಿವೆ. ಮೇ11ರಿಂದ ವಿಚಾರಣೆ ಆರಂಭವಾಗಲಿದೆ ಎಂದು ಖೇಹರ್ ಹೇಳಿದ್ದಾರೆ.

ಬೇಸಿಗೆ ರಜೆ ವೇಳೆ ವಿಚಾರಣೆಗೆ ಹಿರಿಯ ವಕೀಲ ಕಪಿಲ್ ಸಿಬಲ್ ಆಕ್ಷೇಪ ಎತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿಗಳು, ತ್ರಿವಳಿ ತಲಾಖ್ ವಿಚಾರಣೆ ಅತ್ಯಂತ ಪ್ರಮುಖವಾದದ್ದಾಗಿದ್ದು, ಈ ಅರ್ಜಿಗಳನ್ನ ಈಗ ವಿಚಾರಣೆ ನಡೆಸದಿದ್ದರೆ ಹಲವು ವರ್ಷಗಳವರೆಗೆ ಪೆಂಡಿಂಗ್ ಇರುತ್ತವೆ.  ಆಮೇಲೆ ನೀವು ಸುಪ್ರೀಂಕೋರ್ಟ್`ನಲ್ಲಿ ಹಲವು ಕೇಸ್`ಗಳು ಪೆಂಡಿಂಗ್ ಉಳಿದಿವೆ ಎಂದು ನೀವು ಹೇಳುವಂತಿಲ್ಲ ಎಂದು ಚಾಟಿ ಬೀಸಿದ್ದಾರೆ.

ತ್ರಿವಳಿ ತಲಾಖ್ ವಿರೋಧಿಸಿ ನೂರಾರು ಅರ್ಜಿಗಳು ಸುಪ್ರೀಂಕೋರ್ಟ್ ಮುಂದೆ ಬಂದಿದ್ದು, ಫೇಸ್ಬುಕ್, ಟ್ವಿಟ್ಟರ್ ಮೂಲಕ ವಿಚ್ಛೇದನಾ ನೀಡಿದ ಉದಾಹರಣೆಗಳಿವೆ. ಆದರೆ, ಪ್ರತಿಯೊಂದೂ ಅರ್ಜಿಗಳನ್ನ ವಿಚಾರಣೆಗೆ ಕೈಗೊಳದೆ, ತ್ರಿವಳಿ ತಲಾಖ್, ಬಹುಪತ್ನಿತ್ವ ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುತ್ತದೆಯೇ? ಧಾರ್ಮಿಕ ಹಕ್ಕಿನಡಿ ಎತ್ತಿಹಿಡಿಯಬಹುದೇ..? ಇಲ್ಲವೇ ಎಲ್ಲರಿಗೂ ಒಂದೇ ಕಾನೂನು ತರಬಹುದೇ ಎಂಬ ಬಗ್ಗೆ ಸಂವಿಧಾನಪೀಠ ನಿರ್ಧರಿಸಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ವೆಬ್ದುನಿಯಾವನ್ನು ಓದಿ