ತಾಯಿ ತೀರಿಕೊಂಡ ಗಂಟೆಗಳಲ್ಲೇ ಕರ್ತವ್ಯಕ್ಕೆ ಹಾಜರಾದ ವೈದ್ಯರು
ಸೋಮವಾರ, 19 ಏಪ್ರಿಲ್ 2021 (09:22 IST)
ನವದೆಹಲಿ: ಇತ್ತೀಚೆಗೆ ತುಂಬು ಗರ್ಭಿಣಿಯಾಗಿರುವ ಮಹಿಳಾ ವೈದ್ಯೆ ಕೊರೋನಾ ರೋಗಿಗಳನ್ನು ಶುಶ್ರೂಷೆ ಮಾಡುತ್ತಿರುವ ಸುದ್ದಿಯನ್ನು ಓದಿರುತ್ತೀರಿ. ಈಗ ಅದೇ ರೀತಿ ಕರ್ತವ್ಯ ನಿಷ್ಠೆ ಮೆರೆದ ವೈದ್ಯರಿಬ್ಬರ ಸುದ್ದಿ ವೈರಲ್ ಆಗಿದೆ.
ಗುಜರಾತ್ ಮೂಲದ ವೈದ್ಯರಿಬ್ಬರು ತಮ್ಮ ತಾಯಿ ತೀರಿಕೊಂಡ ಎರಡೇ ಗಂಟೆಯೊಳಗೆ ಮತ್ತೆ ಕೊರೋನಾ ರೋಗಿಗಳ ಕರ್ತವ್ಯಕ್ಕೆ ಮರಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುರುವಾರ ಬೆಳಿಗ್ಗೆ ವೈದ್ಯೆ ಶಿಲ್ಪಾ ಪಾಟೀಲ್ ಕೊರೋನಾ ಸೋಂಕಿತ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಇದಾಗಿ ಗಂಟೆಗಳಲ್ಲಿ ಅವರು ಕರ್ತವ್ಯಕ್ಕೆ ಮರಳಿದ್ದಾರೆ.
ಇದೇ ರೀತಿ ಇನ್ನೊಬ್ಬ ವೈದ್ಯ ಡಾ. ರಾಹುಲ್ ಪರ್ಮಾರ್ ಕೂಡಾ ತಮ್ಮ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಕ್ಷಣಗಳಲ್ಲೇ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ವೈದ್ಯರ ಅಗತ್ಯ ಹೆಚ್ಚಾಗಿರುವುದರಿಂದ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ದುಃಖ ಮರೆತು ಕ್ಷಣಗಳಲ್ಲೇ ಕರ್ತವ್ಯಕ್ಕೆ ಮರಳಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.