ಶಬರಿಮಲೈ ದೇಗುಲದ ಧ್ವಜಸ್ತಂಬಕ್ಕೇ ರಾಸಾಯನಿಕ ಸುರಿದ ದುಷ್ಕರ್ಮಿಗಳು

ಸೋಮವಾರ, 26 ಜೂನ್ 2017 (10:36 IST)
ಶಬರಿಮಲೈ: ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ದೇವಾಲಯದ ಚಿನ್ನ ಹೊದಿಸಿದ್ದ ಧ್ವಜಸ್ತಂಬಕ್ಕೆ ದುಷ್ಕರ್ಮಿಗಳು ರಾಸಾಯನಿಕ ಸುರಿದು ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.

 
ಧ್ವಜಸ್ತಂಬಕ್ಕೆ ಇತ್ತೀಚೆಗಷ್ಟೇ ಆಂಧ್ರಪ್ರದೇಶ ಮೂಲದ ಉದ್ಯಮಿಗಳ ಕುಟುಂಬವೊಂದು 3.5 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಹೊದಿಕೆ ಕೊಡುಗೆಯಾಗಿ ನೀಡಿದ್ದರು. ಭಾನುವಾರವಷ್ಟೇ ಧ್ವಜದ ಪ್ರತಿಷ್ಠಾ ವಿಧಿ ನೆರವೇರಿತ್ತು.

ಆದರೆ ಮಧ್ಯಾಹ್ನ ಪೂಜಾ ಕಾರ್ಯಗಳೆಲ್ಲಾ ಮುಗಿಸಿ ಅರ್ಚಕರು ಹೋದ ಮೇಲೆ ದುಷ್ಕರ್ಮಿಗಳು ಧ್ವಜ ಸ್ತಂಬದ ಬುಡಕ್ಕೆ ಪಾದರಸ ಸುರಿದಿದ್ದಾರೆ. ಇದು ಸಿಸಿಟಿವಿಯಲ್ಲಿ ದಾಖಲಾಗಿದೆ. ಪಾದರಸ ಸುರಿದಿದ್ದರಿಂದ ಧ್ವಜ ಸ್ತಂಬದ ಬುಡ ಸುಟ್ಟಂತಾಗಿದೆ.

ಇದೀಗ ಸಿಸಿಟಿವಿ ದೃಶ್ಯಾವಳಿಗಳ ಜಾಡು ಹಿಡಿದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಚಿನ್ನದ ಹೊದಿಕೆ ದಾನ ಮಾಡಿದ ಉದ್ಯಮಿಯ ಕುಟುಂಬದ ಮೇಲಿನ ವೈಷಮ್ಯದಿಂದಾಗಿ ದುಷ್ಕರ್ಮಿಗಳು ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ