ಮುಂಬೈ : ಸಾವರ್ಕರ್ ಅವರನ್ನು ಅವಮಾನಿಸದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಭಾನುವಾರ ಎಚ್ಚರಿಕೆ ನೀಡಿದ್ದಾರೆ.
ಸಾವರ್ಕರ್ ಅವರನ್ನು ಕೀಳಾಗಿ ಬಿಂಬಿಸಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಉಂಟಾಗಲಿದೆ ಎಂದಿದ್ದಾರೆ. ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರನ್ನು ಮಾದರಿಯಾಗಿ ಪರಿಗಣಿಸುತ್ತೇವೆ. ಅವರನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಸಾವರ್ಕರ್ ಅಂಡಮಾನ್ ಜೈಲಿನಲ್ಲಿ 14 ವರ್ಷಗಳ ಕಾಲ ಸೆರೆವಾಸದಲ್ಲಿ ಚಿತ್ರಹಿಂಸೆ ಅನುಭವಿಸಿದ್ದನ್ನು ನಾವು ಓದಬಹುದು. ಇದು ಅವರ ತ್ಯಾಗಕ್ಕೆ ಇದ್ದ ಸಾಕ್ಷಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ಪ್ರಜಾಪ್ರಭುತ್ವ ರಕ್ಷಣೆಗಾಗಿ ಮಾಡಲ್ಪಟ್ಟಿದೆ. ರಾಹುಲ್ ಅವರನ್ನು ಅನಗತ್ಯ ಪ್ರಚೋದಿಸಲಾಗುತ್ತಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ಮೈತ್ರಿ ಮುಂದುವರೆಯಬೇಕು ಎಂದಿದ್ದಾರೆ.
ಪ್ರಧಾನಿ ವಿರುದ್ಧದ ರಾಹುಲ್ ಗಾಂಧಿ ಟೀಕೆಗೆ ಬಿಜೆಪಿ ನಿಲುವನ್ನು ತೀವ್ರವಾಗಿ ಖಂಡಿಸಿರುವ ಅವರು ಮೋದಿ ಎಂದರೆ ಭಾರತವಲ್ಲ. ಮೋದಿಯನ್ನು ಪ್ರಶ್ನಿಸುವುದು ಭಾರತಕ್ಕೆ ಮಾಡುವ ಅಪಮಾನವಲ್ಲ ಎಂದಿದ್ದಾರೆ.