ಯುಪಿ ಚುನಾವಣೆ: 105 ಸ್ಥಾನ ಕಾಂಗ್ರೆಸ್‌ಗೆ

ಭಾನುವಾರ, 22 ಜನವರಿ 2017 (15:00 IST)
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಇದ್ದ ಗೊಂದಲ ನಿವಾರಣೆಯಾಗಿದ್ದು, ಮೈತ್ರಿ ಖಚಿತವಾಗಿದೆ.
ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 105 ಸೀಟುಗಳನ್ನು ಬಿಟ್ಟುಕೊಡಲಾಗಿದೆ, ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
 
ಆರಂಭದಲ್ಲಿ 110 ಸೀಟುಗಳಿಗೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಆದರೆ ಅಖಿಲೇಶ್ ಕೇವಲ 99 ಸೀಟುಗಳನ್ನಷ್ಟೇ ನೀಡಲು ಒಪ್ಪಿದ್ದರು. ಇದು ಕಾಂಗ್ರೆಸ್ ಮುನಿಸಿಗೆ ಕಾರಣವಾಗಿತ್ತು. ಉಭಯ ಪಕ್ಷದ ನಾಯಕರು ಮಾತುಕತೆಯನ್ನು ಮುಂದುವರೆಸಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಖಿಲೇಶ್ ಜತೆಗೆ ಮಾತುಕತೆ ನಡೆಸಿದ್ದರು. ಜತೆಗೆ ಪಕ್ಷದ ಪ್ರತಿನಿಧಿಗಳನ್ನು ಅಖಿಲೇಶ್ ಜತೆ ಮಾತುಕತೆಗೆ ಕಳುಹಿಸಿದ್ದರು. ಇಂದು ಬೆಳಿಗ್ಗೆ ಸಹ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಅಖಿಲೇಶ್‌ಗೆ ಕರೆ ಮಾಡಿದ್ದರು. ಕಾಂಗ್ರೆಸ್ ಒತ್ತಾಯಕ್ಕೆ ಕೊನೆಗೂ ಬಗ್ಗಿರುವ ಅಖಿಲೇಶ್ ಹೆಚ್ಚುವರಿಯಾಗಿ 6 ಸೀಟುಗಳನ್ನು ನೀಡಲು ಒಪ್ಪಿದ್ದಾರೆ. 
 
ಅಖಿಲೇಶ್ ನೇತೃತ್ವದ ಪಕ್ಷ 298 ಸೀಟುಗಳಲ್ಲಿ ಕಣಕ್ಕಿಳಿಯಲಿದೆ. 
 
ಇಂದು ಸಮಾಜವಾದಿ ಪಕ್ಷದ ಚುನಾವಣಾ  ಪ್ರಣಾಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಬಿಡುಗಡೆ ಮಾಡಿದ್ದು, ಬಿಜೆಪಿ ‘ಅಚ್ಚೇ ದಿನ’ ತರುವುದಾಗಿ ನೀಡಿದ್ದ ಭರವಸೆಗಳು ಸುಳ್ಳಾದವು ಎಂದು ಕಿಡಿಕಾರಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ಫೆಬ್ರವರಿ 11 (73ಕ್ಷೇತ್ರಗಳು), ಫೆಬ್ರವರಿ 15 (67 ಕ್ಷೇತ್ರಗಳು), ಫೆಬ್ರವರಿ 19 (69), ಫೆಬ್ರವರಿ 23 (53), ಫೆಬ್ರವರಿ 27 (52), ಮಾರ್ಚ್ 3 (49) ಮತ್ತು ಮಾರ್ಚ್ 8 (40) ರಂದು ಒಟ್ಟು 7ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 11 ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ