ಉಪರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿ ಇಂದು ಘೋಷಣೆ

ಸೋಮವಾರ, 17 ಜುಲೈ 2017 (10:54 IST)
ನವದೆಹಲಿ: ರಾಷ್ಟ್ರಪತಿ ಚುನಾವಣೆ ಆರಂಭವಾಗಿರುವಂತೆಯೇ ಇತ್ತ ಎನ್ ಡಿಎ ಮೈತ್ರಿಕೂಟದಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕಸರತ್ತು ಸಾಗಿದ್ದು, ಈ ಬಗ್ಗೆ ಚರ್ಚೆ ನಡೆಸಲು ಇಂದು ಎನ್ ಡಿಎ  ಮೈತ್ರಿಕೂಟದ ಸಭೆ ನಡೆಯುತ್ತಿದೆ.
 
ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜು.18 ಕೊನೆ ದಿನವಾಗಿದ್ದು, ಎನ್​ಡಿಎ ಅಭ್ಯರ್ಥಿ ಘೊಷಣೆ ಸಂಜೆ ವೇಳೆಗೆ ಹೊರಬೀಳಲಿದೆ. ಅಭ್ಯರ್ಥಿ ಹೆಸರನ್ನು ಗುಟ್ಟಾಗಿರಿಸಲಾಗಿದ್ದು, ಇಂದು ನಡೆಯುವ  ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಕಟವಾಗಲಿದೆ.
 
ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರನ್ನು ಘೊಷಣೆ ಮಾಡಿ, ಆ ಅಭ್ಯರ್ಥಿಯು ರಾಷ್ಟ್ರಪತಿ ಚುನಾವಣೆಗೆ ಬೆಂಬಲ ಸೂಚಿಸಿರುವ ಇತರ ಪಕ್ಷಗಳಿಗೆ ಇಷ್ಟವಾಗದಿದ್ದರೆ ಅದರಿಂದ ಮತದಾನದ ಮೇಲೆ ಅಡ್ಡಪರಿಣಾಮ  ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರಪತಿ ಚುನಾವಣೆ ಮತದಾನ ಮುಗಿದ ಬಳಿಕ ಹೆಸರು ಘೊಷಣೆ ಮಾಡುವ ಕಾರ್ಯತಂತ್ರ ಬಿಜೆಪಿ ಅನುಸರಿಸಿದೆ.  ಇನ್ನು ಉಪರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ 18  ವಿರೋಧ ಪಕ್ಷಗಳು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಆ.5ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.
 

ವೆಬ್ದುನಿಯಾವನ್ನು ಓದಿ