ನವದೆಹಲಿ : ಭಾನುವಾರ ಉದ್ಘಾಟನೆಗೊಂಡ ನೂತನ ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಆರೋಪ ಹೊರಿಸಿ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಮಹಿಳಾ ಸಮ್ಮಾನ್ ಮಹಾಪಂಚಾಯತ್ ಕರೆ ನೀಡಿದ್ದರು. ಇದರ ಭಾಗವಾಗಿ ಹೊಸ ಸಂಸತ್ ಭವನದ ಮುಂದೆ ಪ್ರತಿಭಟಿಸಲು ಯೋಜಿಸಿದ್ದರು. ಅದಕ್ಕಾಗಿ ಮೆರವಣಿಗೆ ಹೊರಟಿದ್ದರು.
ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಈ ವೇಳೆ ಬ್ಯಾರಿಕೇಡ್ ಹಾಕಿ ಕುಸ್ತಿಪಟುಗಳನ್ನು ತಡೆಯಲು ಪೊಲೀಸರು ಮುಂದಾದಾಗ, ಬ್ಯಾರಿಕೇಡ್ಗಳನ್ನ ಭೇದಿಸಲು ಮುಂದಾದರು. ಈ ವೇಳೆ ಕೆಲ ಕುಸ್ತಿಪಟುಗಳ ಮೇಲೆ ಹಲ್ಲೆ ನಡೆಸಿದ ಪೊಲೀಸರು, ಪ್ರತಿಭಟನಾ ನಿರತರನ್ನ ವಶಕ್ಕೆ ಪಡೆದಿದ್ದಾರೆ.