ಕೇರಳ: ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಮನೆ ಕಳೆದುಕೊಂಡ 150 ಕುಟುಂಬಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯು(NSS) ಸ್ವಯಂಪ್ರೇರಿತರಾಗಿ ಮನೆಗಳನ್ನು ನಿರ್ಮಿಸಲಿದೆ ಎಂದು ಕೇರಳದ ಉನ್ನತ ಶಿಕ್ಷಣ ಇಲಾಖೆ ಸಚಿವ ಆರ್ ಬಿಂದು ಶುಕ್ರವಾರ ಹೇಳಿದ್ದಾರೆ.
ಕೇರಳದ ತ್ರಿಶೂರ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಬಿಂದು ಅವರು, ರಾಷ್ಟ್ರೀಯ ಸೇವಾ ಯೋಜನೆಯು ಕೈಗೊಂಡಿರುವ ಅತಿದೊಡ್ಡ ಸ್ವಯಂಸೇವಕ ಚಟುವಟಿಕೆಗಳಲ್ಲಿ ಒಂದಾಗಿದೆ.
ಜುಲೈ 30 ರಂದು ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 200ಕ್ಕೆ ಏರಿಕೆಯಾಗಿದ್ದು, ಇನ್ನೂ 300ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆಯಲ್ಲಿ ವಯನಾಡು ತತ್ತರಿಸಿಹೋಗಿದ್ದು, ಜೀವಹಾನಿ ಜತೆಗೆ ಮನೆ ಹಾನಿಯಾಗಿವೆ.
ರಾಜ್ಯ ರಾಷ್ಟ್ರೀಯ ಸೇವಾ ಯೋಜನೆಯ ವಿವಿಧ ಕೋಶಗಳ ಸಮನ್ವಯದೊಂದಿಗೆ ಮನೆಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
"ಕೇರಳ ವಿಶ್ವವಿದ್ಯಾನಿಲಯಗಳ ಎನ್‌ಎಸ್‌ಎಸ್ ಘಟಕಗಳು, ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ, ತಾಂತ್ರಿಕ ಶಿಕ್ಷಣ ಇಲಾಖೆ, ಐಟಿಐ ಇತ್ಯಾದಿ, ಎನ್‌ಎಸ್‌ಎಸ್ ಮಾಜಿ ಕಾರ್ಯಕ್ರಮ ಸಂಯೋಜಕರು ಮತ್ತು ರಾಜ್ಯ ಅಧಿಕಾರಿಗಳು ಈ ದತ್ತಿ ಮಿಷನ್‌ನಲ್ಲಿ ಭಾಗವಹಿಸುತ್ತಾರೆ" ಎಂದು ಸಚಿವೆ ಬಿಂದು ಹೇಳಿದರು.
ಘಟನೆಯ ದಿನದಂದು ಪರಿಹಾರ ಕಾರ್ಯಾಚರಣೆಯಲ್ಲಿ ಎನ್‌ಎಸ್‌ಎಸ್/ಎನ್‌ಸಿಸಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯನ್ನು ಅವರು ಎತ್ತಿ ತೋರಿಸಿದರು.