ವಯನಾಡು ದುರಂತದಲ್ಲಿ 200 ದಾಟಿದ ಮೃತರ ಸಂಖ್ಯೆ, ಇನ್ನೂ 300 ಮಂದಿ ನಾಪತ್ತೆ

Sampriya

ಶುಕ್ರವಾರ, 2 ಆಗಸ್ಟ್ 2024 (14:16 IST)
Photo Courtesy X
Photo Courtesy X
ವಯನಾಡು: ಭಾರೀ ಭೂಕುಸಿತ ಉಂಟಾದ ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೈನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಭಯಾನಕ ದುರ್ಘಟನೆಯಲ್ಲಿ ಇನ್ನೂ ಸುಮಾರು 300 ಮಂದಿ ನಾಪತ್ತೆಯಾಗಿದ್ದಾರೆ.

ಈಗಾಗಲೇ ಮೃತರ ಸಂಖ್ಯೆ 200ರ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿ, ಸುಮಾರು 300 ಮಂದಿ ಇನ್ನೂ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ. ಇನ್ನು ಎರಡು ಮೂರು ದಿನಗಳಲ್ಲಿ ಕಂದಾಯ ಇಲಾಖೆ ಈ ಕುರಿತ ಖಚಿತ ಸಂಖ್ಯೆಯನ್ನು ತಿಳಿಸಲಿದೆ ಎಂದಿದ್ದಾರೆ.

ನುರಿತ ಸಂಸ್ಥೆಗಳ ನೆರವು ಪಡೆದು ಚಲಿಯಾರ್ ನದಿಯಲ್ಲಿ ಕೋಯಿಕ್ಕೋಡ್‌ವರೆಗೂ ಪೊಲೀಸರು ಶೋಧ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

'ನಿನ್ನೆಯೂ ನಾವು ನದಿಯಲ್ಲಿ ಶೋಧ ನಡೆ‌ಸಿದ್ದೇವೆ. ಪೊಥುಕಲ್ ಬಳಿ ಮೃತದೇಹಗಳು ಪತ್ತೆಯಾಗಿವೆ. ಹಾಗಾಗಿ, ಆಯಾ ವ್ಯಾಪ್ತಿಯಲ್ಲಿ ಕೋಯಿಕ್ಕೋಡ್‌ವರೆಗೆ ಶೋಧ ನಡೆಸುವಂತೆ ನದಿ ಸಮೀಪದಲ್ಲಿ ಬರುವ ಠಾಣೆಗಳಿಗೆ ಸೂಚಿಸಿದ್ದೇವೆ. 143 ಮೃತದೇಹಗಳು ಮತ್ತು ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ದೇಹದ ತುಂಡಾದ ಭಾಗಗಳನ್ನು ಸಂಗ್ರಹಿಸಲಾಗಿದೆ  ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ