ನಾವು ಮೂರನೇ ಬಾರಿಗೆ ಸರ್ಕಾರ ರಚಿಸಿಯೇ ಸಿದ್ಧ: ದೆಹಲಿಯಲ್ಲಿ ಮೋದಿ ಶಪಥ

Krishnaveni K

ಮಂಗಳವಾರ, 4 ಜೂನ್ 2024 (21:07 IST)
ನವದೆಹಲಿ: ನಾನು ಈ ದೇಶದ ಜನತೆಗೆ ಈ ಆಶೀರ್ವಾದ ಮಾಡಿದ್ದಕ್ಕೆ ಅಭಾರಿಯಾಗಿದ್ದೇನೆ. ಮೂರನೇ ಬಾರಿಯೂ ನಾವು ಸರ್ಕಾರ ರಚಿಸಿಯೇ ಸಿದ್ಧ ಎಂದು ಪ್ರಧಾನಿ ಮೋದಿ ಇಂದು ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರ ಭಾಷಣದ ತುಣುಕು ಇಲ್ಲಿದೆ.

ದೇಶದ ಜನತೆ ಬಿಜೆಪಿ ಮೇಲೆ, ಎನ್ ಡಿಎ ಮೇಲೆ ಪೂರ್ಣ ವಿಶ್ವಾಸವಿಟ್ಟಿದ್ದಾರೆ. ಇಂದಿನ ಈ ಗೆಲುವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ಗೆಲುವಾಗಿದೆ. ಭಾರತದ ಸಂವಿಧಾನದಲ್ಲಿ ಅತೀವ ನಿಷ್ಠೆಯ ಗೆಲುವಾಗಿದೆ. ಇದು ಭಾರತದ ಸಂಕಲ್ಪದ ಗೆಲುವಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನ ಗೆಲುವಾಗಿದೆ. 145 ಕೋಟಿ ಭಾರತೀಯರ ಗೆಲುವಾಗಿದೆ.

ಇಂದು ನಾನು ದೇಶದ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣಾ ಆಯೋಗ ಜಗತ್ತಿನ ಅತೀ ದೊಡ್ಡ ಮತದಾನ ಪ್ರಕ್ರಿಯೆಯನ್ನು ಕುಶಲತೆಯಿಂದ ನಿರ್ವಹಿಸಿದೆ.  ನಮ್ಮ ಭದ್ರತಾ ಅಧಿಕಾರಿಗಳು ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ.

ನಾನು ಈ ಗೆಲುವಿಗೆ ದೇಶದ ಜನತೆಗೆ, ಭದ್ರತಾ ಸಿಬ್ಬಂದಿಗಳಿಗೆ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿದಾರರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಯ, ಎನ್ ಡಿಎಯ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ.

1962 ರ ಬಳಿಕ ಮೊದಲ ಬಾರಿಗೆ ಯಾವುದೇ ಸರ್ಕಾರ ಎರಡು ಅವಧಿ ಪೂರೈಸಿ ಮೂರನೇ ಅವಧಿಗೆ ಕಾಲಿಡುತ್ತಿದೆ. ರಾಜ್ಯಗಳಲ್ಲಿ ಎಲ್ಲೆಲ್ಲಿ ವಿಧಾನಸಭೆ ಚುನಾವಣೆಯಾಗಿದೆಯೋ ಅಲ್ಲೆಲ್ಲಾ ಎನ್ ಡಿಎಗೆ ಗೆಲುವು ಸಿಕ್ಕಿದೆ. ಈ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಬಿಜೆಪಿ ಒರಿಶ್ಶಾದಲ್ಲಿ ಸರ್ಕಾರ ರಚಿಸಲಿದೆ. ಲೋಕಸಭೆ ಚುನಾವಣೆಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದು ಬಹುಶಃ ಇದೇ ಮೊದಲ ಬಾರಿ ಇರಬೇಕು, ಜಗನ್ನಾಥನ ನೆಲದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಧಿಕಾರಕ್ಕೇರುತ್ತಿದ್ದಾರೆ. ಬಿಜೆಪಿ ಕೇರಳದಲ್ಲೂ ಸೀಟು ಪಡೆದಿದೆ. ನಮ್ಮ ಕೇರಳದ ಕಾರ್ಯಕರ್ತರು ಸಾಕಷ್ಟು ಬಲಿದಾನ ಮಾಢಿದ್ದಾರೆ. ಬಹಳಷ್ಟು ವರ್ಷಗಳಿಂದ ಸಂಘರ್ಷ ಮಾಡುತ್ತಿದ್ದಾರೆ. ಆ ಬಲಿದಾನಕ್ಕೆ ಇಂದು ಯಶಸ್ಸು ಸಿಕ್ಕಿದೆ. ತೆಲಂಗಾಣದಲ್ಲಿ ನಮ್ಮ ಸಂಖ್ಯೆ ದ್ವಿಗುಣವಾಗಿದೆ. ಮಧ್ಯಪ್ರದೇಶ, ಗುಜರಾತ್, ಛತ್ತೀಸ್ಘಡ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ನಮ್ಮ ಪಕ್ಷ ಕ್ಲೀನ್ ಸ್ವೀಪ್ ಮಾಡಿದೆ. ನಾನು ಈ ಎಲ್ಲಾ ರಾಜ್ಯಗಳ ಮತ್ತು ಸಿಕ್ಕಿಂ, ಆಂಧ್ರಪ್ರದೇಶದ ಮುಂತಾದ ವಿಧಾನಸಭೆ ಮತದಾರರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಿಮ್ಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಬದ್ಧ.

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಎನ್ ಡಿಎ ಅದ್ಭುತ ಪ್ರದರ್ಶನ ನೀಡಿದೆ. ಬಿಹಾರದಲ್ಲೂ ನಿತೀಶ್ ಕುಮಾರ್ ನೇತೃತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. 10 ವರ್ಷ ಮೊದಲು ದೇಶದ ಜನರು ಬದಲಾವಣೆ ಬಯಸಿ ಮತ ನೀಡಿದ್ದರು. ಅಷ್ಟು ಸಮಯ ದೇಶದಲ್ಲಿ ನಿರಾಸೆಯ ಕೂಪದಲ್ಲಿತ್ತು. ಅಂತಹ ಸಮಯದಲ್ಲಿ ದೇಶ ನಮಗೆ ಹೊಸ ಅವಕಾಶ ನೀಡಿತ್ತು. 2019 ರಲ್ಲಿ ಮತ್ತೊಮ್ಮೆ ದೇಶದ ಜನರು ಎನ್ ಡಿಎಗೆ ಆದೇಶ ನೀಡಿದ್ದರು. ಇದೀಗ 2024 ರಲ್ಲಿ ಮತ್ತೊಮ್ಮೆ ದೇಶದ ಜನತೆ ಎನ್ ಡಿಎಗೆ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ನಾನು ಜನತೆ ಮುಂದೆ ವಿನಯಪೂರ್ವಕವಾಗಿ ತಲೆಬಾಗುತ್ತೇನೆ.

ಇದು ನನಗೂ ಭಾವುಕ ಕ್ಷಣವಾಗಿದೆ. ನನ್ನ ತಾಯಿ ತೀರಿಕೊಂಡ ಬಳಿಕ ಇದು ನನ್ನ ಮೊದಲ ಚುನಾವಣೆಯಾಗಿತ್ತು. ಆದರೆ ದೇಶದ ಕೋಟಿ ಕೋಟಿ ತಾಯಂದಿರು, ಸಹೋದರಿಯರು ಆ ಅಮ್ಮನ ಕೊರತೆ ನೀಗಿಸಿದರು. ದೇಶದ ಯಾವುದೇ ಮೂಲೆಗೆ ಹೋದರೂ ತಾಯಂದಿರು, ಸಹೋದರಿಯರು ಪ್ರೀತಿ, ವಿಶ್ವಾಸ ನೀಡಿದರು. ಅದನ್ನು ಸಂಖ್ಯೆಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಮಹಿಳೆಯರು ಮತದಾನದ ದಾಖಲೆಯನ್ನೇ ಮಾಡಿದರು. ಈ ಪ್ರೀತಿಯನ್ನು ನಾನು ಶಬ್ಧಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಈ ತಾಯಂದಿರು ನನಗೆ ಪ್ರೇರಣೆ ನೀಡಿದ್ದಾರೆ.

ನಮ್ಮೆಲ್ಲರ ಮುಂದೆ ವಿಕಸಿತ ಭಾರತದ ಸಂಕಲ್ಪವಿದೆ. 10 ವರ್ಷಗಳ ನಂತರವೂ ಜನರ ಆಶೀರ್ವಾದ ನಮ್ಮ ಉತ್ಸಾಹ ಹೆಚ್ಚಿಸಿದೆ. ಇದು ನಮಗೆ ಸ್ಪೂರ್ತಿ ಹೆಚ್ಚಿಸುತ್ತದೆ. ನಮ್ಮ ವಿರೋಧಿಗಳು ಬಿಜೆಪಿ ಏಕಾಂಗಿಯಾಗಿ ಗೆದ್ದಷ್ಟೂ ಗೆಲ್ಲಲಾಗಲಿಲ್ಲ. ನಾನು ದೇಶದ ಮೂಲೆ ಮೂಲೆಯಲ್ಲಿರುವ ಬಿಜೆಪಿ ಕಾರ್ಯಕರ್ತರು, ದೇಶದ ಜನತೆಗೆ ನೀವು ಪಟ್ಟಿರುವ ಶ್ರಮ ಮೋದಿಗೆ ನಿರಂತರವಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತಿದೆ.  ನೀವು 10 ಗಂಟೆ ಕೆಲಸ ಮಾಡಿದರೆ ಮೋದಿ 18 ಗಂಟೆ ಕಾಲ ಕೆಲಸ ಮಾಡುತ್ತೇನೆ, ನೀವು ಎರಡು ಹೆಜ್ಜೆ ಮುಂದಿಟ್ಟರೆ ನಾನು ನಾಲ್ಕು ಹೆಜ್ಜೆ ಮುಂದಿಡುತ್ತೇನೆ. ದೇಶದ ಮುನ್ನಡೆಗಾಗಿ ನಾವೆಲ್ಲರೂ ಜೊತೆಯಾಗಿ ಹೆಜ್ಜೆಯಿಡಲಿದ್ದೇವೆ. ಇದು ಮೋದಿಯ ಗ್ಯಾರಂಟಿಯಾಗಿದೆ.

ನಮ್ಮ ಮುಂದಿನ ಗುರಿ ಹಸಿರು ಕ್ರಾಂತಿಯದ್ದಾಗಿದೆ. ಯುವ ಜನರಿಗೆ ಉದ್ಯೋಗ ನೀಡುವುದಾಗಿದೆ. ನಮ್ಮ ಸೇನೆಯನ್ನು ಆತ್ಮನಿರ್ಭರವಾಗಿ ಮಾಡುವುದಾಗಿದೆ. ಡಿಜಿಟಲ್ ಇಂಡಿಯಾ ಉತ್ತೇಜಿಸುವುದು, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ