ಗಾಜಾಪಟ್ಟಿಯನ್ನ ಟೆಂಟ್ ಸಿಟಿ ಮಾಡ್ತೇವೆ
ಇಸ್ರೇಲ್-ಹಮಾಸ್ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ 3 ಸಾವಿರ ದಾಟಿದೆ. ಗಾಜಾ ನಗರ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳ ಮೇಲೂ ಇಸ್ರೇಲ್ ತೀವ್ರ ದಾಳಿ ನಡೆಸುತ್ತಿದ್ದು, ಕಟ್ಟಡಗಳು ನೆಲಸಮಗೊಂಡು ಅವುಗಳಡಿಯಲ್ಲಿ ಅಸಂಖ್ಯ ಜನರು ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಹಮಾಸ್ ಉಗ್ರರ ವಶದಲ್ಲಿರುವ 150 ಒತ್ತೆಯಾಳುಗಳ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಇನ್ನು ಯಾವುದೇ ಮಾಹಿತಿ ಸಿಗದ ಕಾರಣ ಕುಟುಂಬ ಸದಸ್ಯರು ಆತಂಕದಲ್ಲೇ ದಿನ ಕಳೆಯುವಂತಾಗಿದೆ. ಗಾಜಾಪಟ್ಟಿಯಲ್ಲಿ ವಿದ್ಯುತ್ ಪೂರೈಕೆಗೆ ಸಂಪೂರ್ಣವಾಗಿ ಜನರೇಟರ್‌ಗಳನ್ನೇ ಅವಲಂಬಿಸಲಾಗಿದೆ. ತನ್ನ ಮೇಲೆ ದಾಳಿ ನಡೆಸಿದ ಗಾಜಾಪಟ್ಟಿಯ ಹಮಾಸ್ ಉಗ್ರರನ್ನು ಸರ್ವನಾಶ ಮಾಡುವುದಾಗಿ ಶಪಥ ಮಾಡಿರುವ ಇಸ್ರೇಲ್, ಬುಧವಾರ ಕ್ಷಿಪಣಿಗಳ ಮಳೆಯನ್ನೇ ಸುರಿಸಿದೆ. ಗಾಜಾಪಟ್ಟಿಗೆ ಎಲ್ಲಾ ದಿಕ್ಕುಗಳಿಂದಲೂ ಸಂಪರ್ಕ ಕಡಿತಗೊಳಿಸಿದ್ದು, ಶೀಘ್ರದಲ್ಲೇ ಭೂದಾಳಿ ನಡೆಸುವುದಾಗಿ ಪ್ರಕಟಿಸಿದೆ. ಜೊತೆಗೆ ಗಾಜಾ ಪಟ್ಟಿ ಪ್ರದೇಶವನ್ನು ಟೆಂಟ್ ಸಿಟಿ ಮಾಡುವುದಾಗಿ ಎಚ್ಚರಿಸಿದೆ.