ಅಮೆರಿಕದಿಂದ ಹಿಂದಿರುಗಿದ ಮೋದಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ
ಭಾನುವಾರ, 26 ಸೆಪ್ಟಂಬರ್ 2021 (13:38 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾನುವಾರ ನವದೆಹಲಿಗೆ ಮರಳಿದರು.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಮತ್ತು ತರುಣ್ ಚುಗ್, ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್, ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಮತ್ತು ಪಕ್ಷದ ಹಿರಿಯ ನಾಯಕರು, ಹಿರಿಯ ಅಧಿಕಾರಿಗಳು ಪ್ರಧಾನಿ ಮೋದಿಯವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.
ದೇಶದ ವಿವಿಧ ಭಾಗಗಳಿಂದ ವಿವಿಧ ರಾಜ್ಯಗಳ ಕಲಾವಿದರನ್ನು ಆಹ್ವಾನಿಸಿ ಸಂಗೀತ ವಾದ್ಯಗಳನ್ನು ನುಡಿಸಲಾಯಿತು. ಕಲಾತಂಡಗಳ ಜೊತೆಗೆ ನಾಯಕರು ಮೋದಿ ಅವರನ್ನು ಭವ್ಯವಾಗಿ ಸ್ವಾಗತಿಸಿದ್ದಾರೆ.
ಯುಎಸ್ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಶ್ವೇತಭವನದಲ್ಲಿ ಆತಿಥ್ಯ ನೀಡಿದರು, ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಜನವರಿ 20 ರಂದು ಬಿಡೆನ್ ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿ ಇದಾಗಿದೆ.
ಅಲ್ಲಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದರು. ಮೊದಲ ಚತುಷ್ಕೋನ ಭದ್ರತಾ ಸಂವಾದ(ಕ್ಯೂಎಡಿ) ಶೃಂಗಸಭೆಯಲ್ಲಿಯೂ ಭಾಗವಹಿಸಿದ್ದರು. ಅಲ್ಲದೇ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಅಮೇರಿಕನ್ ಕಂಪನಿಗಳ ಹಲವು ಸಿಇಒಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.