ನವದೆಹಲಿ : ಕಳೆದ ವರ್ಷ ಭಾರತ 30.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡಿ ಸರ್ವಕಾಲಿಕ ದಾಖಲೆ ಬರೆದಿದೆ,
ಎನ್ನುವ ಸುದ್ದಿ ಬೆನ್ನಲ್ಲೆ ಇದೀಗ ಅತಿ ಹೆಚ್ಚು ವಸ್ತುಗಳನ್ನು ರಫ್ತು ಮಾಡಿದ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ 3ನೇ ಸ್ಥಾನ ಪಡೆದಿದೆ
ನೀತಿ ಆಯೋಗ ಸಿದ್ಧಪಡಿಸಿರುವ ಸೂಚ್ಯಂಕ ಪ್ರಕಾರ 2021ರಲ್ಲಿ ಗುಜರಾತ್ ನಂಬರ್ 1, ಮಹಾರಾಷ್ಟ್ರ ನಂಬರ್ 2, ಹಾಗೂ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ರಾಜ್ಯಗಳು 2021-22ನೇ ಸಾಲಿನಲ್ಲಿ ವಿದೇಶಗಳಿಗೆ ಅತಿಹೆಚ್ಚು ರಫ್ತು ಮಾಡಿದ ರಾಜ್ಯಗಳಾಗಿವೆ.
ರಫ್ತು ಸೂಚ್ಯಂಕವನ್ನು ಇನ್ಸ್ಟಿಟ್ಯೂಟ್ ಆಫ್ ಕಾಂಪಿಟೆಟಿವ್ನೆಸ್ನ ಜೊತೆಗೂಡಿ ನೀತಿ ಆಯೋಗ ಸಿದ್ಧಪಡಿಸಿದೆ. ವ್ಯಾಪಾರ ನೀತಿ ಆಯೋಗ ಸಿದ್ಧಪಡಿಸಿದ ವ್ಯಾಪಾರ ನೀತಿ,
ವಾಣಿಜ್ಯ ಪರಿಸರ, ರಫ್ತು ಪರಿಸರ ಹಾಗೂ ರಫ್ತು ಸಾಧನೆ ಎನ್ನುವ ನಾಲ್ಕು ಅಂಶಗಳನ್ನು ಪ್ರಮುಖವಾಗಿ ಇಲ್ಲಿ ಪರಿಗಣಿಸಲಾಗಿದೆ.
ಈ ಎಲ್ಲ ಅಂಶಗಳಲ್ಲಿ ಒಟ್ಟಾರೆಯಾಗಿ ಗುಜರಾತ್ ಸತತ 2ನೇ ವರ್ಷವೂ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಈ ನಂತರದ ಸ್ಥಾನಗಳನ್ನು ಅನುಕ್ರಮವಾಗಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ, ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಆಂಧ್ರ, ತೆಲಂಗಾಣ ಪಡೆದುಕೊಂಡಿವೆ. ಲಕ್ಷದ್ವೀಪ, ಅರುಣಾಚಲ ಪ್ರದೇಶ, ಮಿಜೋರಾಂ, ಲಡಾಖ್ ಮತ್ತು ಮೇಘಾಲಯ ಕೊನೆ ಸ್ಥಾನಗಳಲ್ಲಿವೆ.