ಗೋರಖ್ಪುರ: ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪತಿಯಲ್ಲಿ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
10 ದಿನಗಳ ಹಿಂದೆ ದುಬೈನಿಂದ ಬಂದಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ. ಶವವನ್ನು ಎರಡು ಭಾಗಗಳಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಮನೆಯಿಂದ ದೂರದ ಹೊಲದಲ್ಲಿ ಎಸೆದಿದ್ದರು.
ಭಾನುವಾರ ಬೆಳಗ್ಗೆ ದಿಯೋರಿಯಾ ಜಿಲ್ಲೆಯ ಪತ್ಖೌಲಿ ಗ್ರಾಮದ ರೈತನೊಬ್ಬರ ಹೊಲದಲ್ಲಿ ಟ್ರಾಲಿ ಬ್ಯಾಗ್ ಪತ್ತೆಯಾಗಿತ್ತು. ಅದನ್ನು ತೆರೆದು ನೋಡಿದಾಗ ವ್ಯಕ್ತಿಯೊಬ್ಬರ ದೇಹದ ಮೇಲ್ಭಾಗ ಮತ್ತು ಕೆಳಭಾಗ ಕತ್ತರಿಸಿ ಇಟ್ಟಿದ್ದನ್ನು ಕಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಸೂಟ್‌ಕೇಸ್‌ಗೆ ಜೋಡಿಸಲಾಗಿದ್ದ ಏರ್‌ಲೈನ್ ಟ್ಯಾಗ್ ಮೂಲಕ ಪೊಲೀಸರು ಮೃತ ವ್ಯಕ್ತಿ ನೌಶಾದ್ ಅಹ್ಮದ್ (38) ಅವರನ್ನು ಗುರುತಿಸಿದ್ದಾರೆ.
ನೌಶಾದ್ ಅವರ ಮನೆಗೆ ಪೊಲೀಸರು ತೆರಳಿ ಪತ್ನಿ ರಜಿಯಾ (30) ಎಂಬಾಕೆಯನ್ನು ವಿಚಾರಿಸಿದ್ದಾರೆ. ಮನೆಯೊಳಗಿದ್ದ ರಕ್ತದ ಕಲೆಗಳು ಮತ್ತು ಇನ್ನೊಂದು ಸೂಟ್‌ಕೇಸ್ ಅನುಮಾನಕ್ಕೆ ಕಾರಣವಾಯಿತು. ಆಗ ವಿಚಾರಣೆ ಮಾಡಿದಾಗ ನೌಶಾದ್ ಅವರ ಸೋದರಳಿಯ ರುಮಾನ್ (28) ಸಹಾಯದಿಂದ ತನ್ನ ಗಂಡನನ್ನು ಕೊಂದಿದ್ದಾಗಿ ಪತ್ನಿ ಒಪ್ಪಿಕೊಂಡಿದ್ದಾಳೆ. ರಜಿಯಾ ಮತ್ತು ರುಮಾನ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.
ಭಾನುವಾರ ಬೆಳಗಿನಜಾವ 2 ಗಂಟೆ ಸುಮಾರಿಗೆ ಈ ಕೊಲೆ ನಡೆದಿದೆ. ರಜಿಯಾ, ರುಮಾನ್ ಮತ್ತು ಅವರ ಸ್ನೇಹಿತ ಹಿಮಾಂಶು ಅವರು ಸಂಚು ರೂಪಿಸಿದ್ದಾರೆ. ನೌಶಾದ್ ಅಹ್ಮದ್ ಅವರ ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿ, ಸೂಟ್‌ಕೇಸ್‌ನಲ್ಲಿ ತುಂಬಿಸಿ ವಾಹನದ ಮೂಲಕ ಸಾಗಿಸಿ ಮನೆಯಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಹೊಲದಲ್ಲಿ ಎಸೆದಿದ್ದರು.