ಮೂರು ತಿಂಗಳಲ್ಲಿ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ: ರೇಪ್ ಪೀಡಿತರು

ಮಂಗಳವಾರ, 2 ಆಗಸ್ಟ್ 2016 (15:55 IST)
ಮುಂದಿನ ಮೂರು ತಿಂಗಳಲ್ಲಿ ನಮಗೆ ನ್ಯಾಯ ದೊರೆಯದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬುಲಂದ್‌ಶಹರ್ ಸಾಮೂಹಿಕ ಅತ್ಯಾಚಾರ ಪೀಡಿತ ತಾಯಿ ಮತ್ತು ಮಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪ್ರಕರಣದಲ್ಲಿ ಉತ್ತರ ಪ್ರದೇಶ್ ಪೊಲೀಸರು ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ಪೀಡಿತರ ಕುಟುಂಬ ಆರೋಪಿಸಿದ ಬಳಿಕ ತನಿಖೆಗಾಗಿ  300 ಸದಸ್ಯರ ತನಿಖಾ ತಂಡವನ್ನು  ರಚಿಸಲಾಗಿದೆ. ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಪೊಲೀಸರ ವಾಹನವೊಂದು ಅದೇ ಸ್ಥಳದಿಂದ ವೇಗವಾಗಿ ಹಾದು ಹೋಯಿತು. ನಾವು ಕೂಗಾಡುತ್ತಿದ್ದರೂ ನಮ್ಮ ಧ್ವನಿ ಅವರಿಗೆ ಕೇಳಿಸಲಿಲ್ಲ. ಪೊಲೀಸ್ ಸಹಾಯವಾಣಿ ಒಂದು ಸಲ ವ್ಯಸ್ತವೆಂದು ಬರುತ್ತಿತ್ತು, ಇನ್ನೊಂದು ಕ್ಷಣದಲ್ಲಿ ರಿಂಗ್ ಆದರೂ ಯಾರೂ ಸ್ಪಂದಿಸುತ್ತಿರಲಿಲ್ಲ ಎಂದು ಪೀಡಿತರಲ್ಲಿ ಒಬ್ಬರು ದೂರಿದ್ದಾರೆ.

4:01 ಗಂಟೆಗೆ ನಾವು ಪೊಲೀಸ್ ಠಾಣೆಗೆ ಕರೆ ಮಾಡಿದೆವು. ಆದರೆ ಯಾರೂ ಉತ್ತರಿಸಲಿಲ್ಲ. ಆಗ ನಾವು ನೊಯ್ಡಾದಲ್ಲಿರುವ ಗೆಳೆಯನಿಗೆ ಕರೆ ಮಾಡಿ ಸಹಾಯ ಕೇಳಿದೆವು. ಆತ ನಮಗೆ ಸಹಾಯ ಮಾಡಿದ. 15 ನಿಮಿಷದ ಬಳಿಕ ನಾವು ಮತ್ತೆ ಪೊಲೀಸ್ ಠಾಣೆಗೆ ಕರೆ ಮಾಡಿದೆವು. ಆದರೆ ಆ ಕಡೆಯಿಂದ ಉತ್ತರ ಬರಲಿಲ್ಲ. ಪೊಲೀಸರ ನಿರ್ಲಕ್ಷ್ಯತನ ನಮ್ಮ ಈ ಅವಸ್ಥೆಗೆ ಕಾರಣ. ನಮಗೆ ನ್ಯಾಯ ಸಿಗದಿದ್ದರೆ  ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪೀಡಿತ ಬಾಲಕಿ ತಂದೆ ಎಚ್ಚರಿಕೆ ನೀಡಿದ್ದಾರೆ.

ಹೆದ್ದಾರಿಯಲ್ಲಿ ಬರುತ್ತಿದ್ದ ಕಾರೊಂದನ್ನು ತಡೆಗಟ್ಟಿದ ದುಷ್ಕರ್ಮಿಗಳು ಅದರಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರ ಮೇಲೆ ಹಲ್ಲೆ ಮಾಡಿ ಬಂದೂಕು ತೋರಿಸಿ ತಾಯಿ ಮತ್ತು 13 ವರ್ಷದ ಮಗಳನ್ನು ಎಳೆದೊಯ್ದ ಅತ್ಯಾಚಾರ ನಡೆಸಿದ್ದರು. ಘಟನೆ ನಡೆದ ಸ್ಥಳದಿಂದ 100ಮೀಟರ್‌ಗಳ ಅಂತರದಲ್ಲೇ ಪೊಲೀಸ್ ಠಾಣೆ ಇದ್ದು, ಹಲ್ಲೆಗೊಳಗಾದವರ ಕಾರು 3 ಗಂಟೆಗಳ ಕಾಲ ಅಲ್ಲಿಯೇ  ನಿಂತಿದ್ದರೂ ಪೊಲೀಸರ ಗಮನಕ್ಕೆ ಬಂದಿರಲಿಲ್ಲ.

ಘಟನೆಯ ಕುರಿತಂತೆ ಮತ್ತು ಆರೋಪಿಗಳನ್ನು ಬಂಧಿಸಲು ಕೈಗೊಂಡಿರುವ ಕ್ರಮಗಳ ಕುರಿತಂತೆ ವಿಸ್ತ್ರತ ವರದಿ ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರವನ್ನು ಕೇಳಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ