ಪೊಲೀಸ್ ಸ್ಟೇಷನ್ ಗೆ ಮಗುವನ್ನು ಕರೆದೊಯ್ದು ಕೆಲಸ ಮಾಡಿದ ಮಹಿಳಾ ಪೇದೆಗೆ ಸಿಕ್ಕ ಬಹುಮಾನವೇನು ಗೊತ್ತಾ?
ಸೋಮವಾರ, 29 ಅಕ್ಟೋಬರ್ 2018 (10:06 IST)
ನವದೆಹಲಿ: ಮಹಿಳೆ ತನ್ನ ಸಂಸಾರ ಮತ್ತು ಕೆಲಸ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಚಾಕಚಕ್ಯತೆ ಹೊಂದಿದ್ದಾಳೆ. ಇದೀಗ ಅಂತಹದ್ದೇ ಕೆಲಸ ಮಾಡಿದ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ತಕ್ಕ ಬಹುಮಾನವೇ ಸಿಕ್ಕಿದೆ.
ಉತ್ತರ ಪ್ರದೇಶದ ಝಾನ್ಸಿ ಪೊಲೀಸ್ ಠಾಣೆಯ ಮಹಿಳಾ ಪೇದೆ ಅರ್ಚನಾ ಜಯಂತ್ ತನ್ನ ಪುಟ್ಟ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಫೋಟೋ ನೋಡಿ ಸಾವಿರಾರು ಜನ ಆಕೆಯ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಡಿಜಿಪಿ ಓಂ ಪ್ರಕಾಶ್ ಯಾದವ್ ಕಣ್ಣಿಗೂ ಬಿದ್ದು, ಆಕೆಯ ಪೋಷಕರು ಇರುವ ಆಗ್ರಾಕ್ಕೆ ವರ್ಗಾವಣೆ ಮಾಡಿ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲದೆ, 1,000 ರೂ. ನಗದು ಬಹುಮಾನವನ್ನೂ ನೀಡಿದ್ದಾರೆ. ಪೇದೆ ಜತೆ ಮಾತನಾಡಿದ ಡಿಜಿಪಿ ಈಗಿರುವ ಠಾಣೆಯಲ್ಲಿ ಕೆಲಸ ಮಾಡುವಾಗ ಮಗುವನ್ನು ನೋಡಿಕೊಳ್ಳಲು ಆಕೆಗೆ ಯಾರ ಸಹಾಯವೂ ಇಲ್ಲ. ಆ ಕಾರಣಕ್ಕೆ ಮಗುವನ್ನೂ ಜತೆಯಲ್ಲಿ ಕರೆದೊಯ್ದು ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರಂತೆ. ಸಮಸ್ಯೆಗೆ ಡಿಜಿಪಿ ಓಂ ಪ್ರಕಾಶ್ ತಕ್ಷಣವೇ ಸ್ಪಂದಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.