ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಕೊಲ್ಲದಿದ್ದರೆ ಚೆನ್ನಾಗಿರುತ್ತಿತ್ತು, ಅದರ ಬದಲು ಆತನನ್ನು ಜೈಲಿನಲ್ಲಿರಿಸಬೇಕಾಗಿತ್ತು ಎಂದು ಹೇಳುವುದರ ಮೂಲಕ ಜಮ್ಮು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಆರ್.ಡಿ ಶರ್ಮಾ ಹೊಸ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ.
ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನ್ನಾಡುತ್ತ, ಆತನನ್ನು ಸಾಯುವವರೆಗೆ ಜೈಲಲ್ಲಿ ಇಡಬಹುದಿತ್ತು. ಕೊಲ್ಲುವುದಕ್ಕಿಂತ ಇದೇ ಉತ್ತಮವಾಗಿತ್ತು. ನನಗೆ ಹಾಗನ್ನಿಸುತ್ತದೆ. ಅಮಾಯಕರನ್ನು ಕೊಂದ ಮತ್ತು ವಿನಾಶಕ್ಕೆ ಕಾರಣರಾದ ಉಗ್ರರನ್ನು ಹತ್ಯೆಗೈಯ್ಯುವುದು ಸರಿಯಾದುದ್ದೆ. ಆದರೆ ಕಾಶ್ಮೀರದ ಜನರು ಈಗಲು ಉಗ್ರರ ಪರವಾಗಿದ್ದಾರೆ ಎನ್ನುವುದೇ ಎದುರಾಗುವ ಸಮಸ್ಯೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಉಗ್ರನನ್ನು ಕೊಂದ ಬಳಕವೇ ಈ ದೊಡ್ಡ ಸಮಸ್ಯೆ ಪ್ರಾರಂಭವಾಗಿದ್ದು. ನಾನು ಹೇಳುತ್ತಿರುವುದು ಎಷ್ಟು ಸರಿ, ಎಷ್ಟು ತಪ್ಪು ಎಂದು ಗೊತ್ತಿಲ್ಲ. ಆತನನ್ನು ಬಂಧಿಸಿದ್ದರೆ ಮಕ್ಕಳ ಶಾಲಾ ಶಿಕ್ಷಣ ಹಾಳಾಗುತ್ತಿರಲಿಲ್ಲ. ನಾನು ರಾಜಕಾರಣಿಯಾಗಿ ಈ ಮಾತುಗಳನ್ನಾಡುತ್ತಿಲ್ಲ. ಒಬ್ಬ ಶಿಕ್ಷಣತಜ್ಞನಾಗಿ ಅಷ್ಟೇ ಎಂದಿದ್ದಾರೆ ಶರ್ಮಾ.