ಚುನಾವಣಾ ಆಖಾಢಕ್ಕೆ ಕುಸ್ತಿಪಟುಗಳಾದ ಬಜರಂಗ್‌, ವಿನೇಶಾ: ಪುಷ್ಟಿ ನೀಡಿದ ರಾಹುಲ್ ಗಾಂಧಿ ಭೇಟಿ

Sampriya

ಬುಧವಾರ, 4 ಸೆಪ್ಟಂಬರ್ 2024 (14:21 IST)
Photo Courtesy X
ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಇಂದು ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಾಟ್ ಅವರನ್ನು ಭೇಟಿಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಇಬ್ಬರು ತಾರಾ ಕುಸ್ತಿಪಟುಗಳನ್ನು ಕಣಕ್ಕಿಳಿಸಬಹುದು ಎನ್ನುವ ಊಹಾಪೋಹಗಳ ನಡುವೆ ರಾಹುಲ್‌ ಗಾಂಧಿ ಅವರ ಈ ಭೇಟಿ ನಡೆದಿದೆ. ಹೀಗಾಗಿ, ಊಹೆಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.

ಬಜರಂಗ್‌ ಪೂನಿಯಾ ಮತ್ತು ವಿನೇಶಾ ಫೋಗಾಟ್ ಚುನಾವಣೆಯ ಕಣಕ್ಕಿಳಿಯುವರೇ ಎಂಬ ಬಗ್ಗೆ ಗುರುವಾರದ ವೇಳೆಗೆ ಸ್ಪಷ್ಟತೆ ದೊರೆಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಹರಿಯಾಣ ಉಸ್ತುವಾರಿ ದೀಪಕ್ ಬಬಾರಿಯಾ ಮಂಗಳವಾರ ಪ್ರತಿಕ್ರಿಯಿಸಿದ್ದರು.

ಕಾಂಗ್ರೆಸ್‌ ತನ್ನ ಎಕ್ಸ್‌ ಖಾತೆಯಲ್ಲಿ ರಾಹುಲ್‌ ಅವರು ವಿನೇಶಾ ಮತ್ತು ಪೂನಿಯಾ ಅವರನ್ನು ಭೇಟಿಯಾದ ಫೋಟೊ ಹಂಚಿಕೊಂಡಿದೆ.

ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯು ಮಂಗಳವಾರದವರೆಗೆ 90 ಸ್ಥಾನಗಳ ಪೈಕಿ 66 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಇನ್ನೆರಡು ದಿನಗಳಲ್ಲಿ ಉಳಿದ ಸ್ಥಾನಗಳಿಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಲಿದೆ ಎಂದು ಹೇಳಲಾಗಿದೆ. ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ