ಸರ್ಕಾರಿ ಅಧಿಕಾರಿಗಳ ಹಾಜರಾತಿಗೆ ಬಯೋ ಮೆಟ್ರಿಕ್ ಜಾರಿಗೆ ತಂದ ಯೋಗಿ ಆದಿತ್ಯಾನಾಥ್
ಭಾನುವಾರ, 23 ಏಪ್ರಿಲ್ 2017 (17:39 IST)
ಉತ್ತರಪ್ರದೇಶದಲ್ಲಿ ರೈತರ ಸಾಲಮನ್ನಾ, ಕಸಾಯಿಖಾನೆಗಳಿಗೆ ಬೀಗ ಹಾಕುವಂತಹ ಕ್ರಾಂತಿಕಾರಕ ನಿರ್ಧಾರ ಕೈಗೊಂಡ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್, ಇದೀಗ ಸರ್ಕಾರಿ ಅಧಿಕಾರಿಗಳ ಹಾಜರಾತಿ ಮೇಲೆ ಕಣ್ಣಿಟ್ಟಿದ್ದಾರೆ.
ಅಧಿಕಾರಿಗಳು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಬೇಕೆಂಬ ದೃಷ್ಟಿಯಿಂದ ಬ್ಲಾಕ್ ಹಂತದ ಅಧಿಕಾರಿಗಳಿಗೆ ಬಯೋ ಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಂ ಜಾರಿಗೆ ಮುಂದಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖಾಧಿಕಾರಿಗಳ ಸಭೆ ಬಳಿಕ ಆದಿತ್ಯಾನಾಥ್ ಈ ಆದೇಶ ಮಾಡಿದ್ದಾರೆ. ಜೊತೆಗೆ ಗ್ರಾಮ ಪಂಚಾಯ್ತಿಗಳಲ್ಲಿ ಬೋರ್ಡ್ ನೇತು ಹಾಕಿ ಅದರಲ್ಲಿ ಅಧ್ಯಕ್ಷರ ಸಂಪರ್ಕದ ಮಾಹಿತಿ ಮತ್ತು ಜರುಗುತ್ತಿರುವ ಕಾಮಗಾರಿಗಳ ವಿವರಣೆ ನೀಡುವಂತೆ ಆದೇಶಿಸಿದ್ದಾರೆ. ಈ ಮೂಲಕ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ನೀಡಲು ಆದಿತ್ಯಾನಾಥ್ ಮುಂದಾಗಿದ್ದಾರೆ.
ಪ್ರಧಾನಮಂತ್ರಿ ಆವಾಜ್ ಯೋಜನೆಯ ಗುರಿ ಮುಟ್ಟಬೇಕೆಂದು ಅಧಿಕಾರಿಗಳಿಗೆ ಯೋಗಿತ್ಯಾನಾಥ್ ಕಟ್ಟಪ್ಪಣೆ ಮಾಡಿದ್ದಾರೆ. ಈ ಯೋಜನೆಯಡಿ ಫಲಾನುಭವಿಗಳ ನೋಂದಣಿ, ಫೋಟೋ ಅಪ್ಲೋಡ್, 5.73 ಲಕ್ಷ ಕುಟುಂಬಗಳಿಗೆ ಮನೆಗಳ ಮಂಜೂರಾತಿ ಕಾರ್ಯ ಶೀಘ್ರ ನಡೆಸುವಂತೆ ಆದೇಶಿಸಿದ್ದಾರೆ.