ರವಿವಾರ ರಾತ್ರಿ ಆಕೆಯನ್ನು ಅಪಹರಿಸಿದ್ದ ಆರೋಪಿಗಳು ಸೋಮವಾರ ಬೆಳಿಗ್ಗೆ ಆಕೆಯನ್ನು ಮರಳಿ ಕರೆ ತಂದು, ಆಕೆಯ ಮನೆಯ ಹೊರಗೆ ತಂದು ಬಿಟ್ಟು ಹೋಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಅವರು ಬೆದರಿಕೆ ಒಡ್ಡಿದ್ದಾರೆ. 8 ಗಂಟೆ ಸುಮಾರಿಗೆ ಬಾಲಕಿ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಆಕೆಯ ಮನೆಗೆ ಬಂದು ದೂರನ್ನು ದಾಖಲಿಸಿಕೊಂಡಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಪೀಡಿತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರವಾಗಿರುವುದು ಸಾಬೀತಾಗಿದೆ.
ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದು,ಅವರಲ್ಲೊಬ್ಬ 12 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಬಾಲಕಿಯ ಪರಿಚಯ ಹೊಂದಿದ್ದ ಆತ ಆಕೆಯ ಜತೆ ಫೋನ್ ಸಂಭಾಷಣೆ ನಡೆಸುತ್ತಿದ್ದುದು ಕಾಲ್ ರಿಕಾರ್ಡ್ಸ್ ಮೂಲಕ ಸಾಬೀತಾಗಿದೆ. ಇನ್ನೊಬ್ಬ ಅಪ್ರಾಪ್ತನಾಗಿದ್ದು 11 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಮೂರನೆಯ ಆರೋಪಿ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ನಾಲ್ಕನೆಯ ಆರೋಪಿ ಪರಾರಿಯಾಗಿದ್ದಾನೆ. ಅಪ್ರಾಪ್ತನನ್ನು ಹೊರತು ಪಡಿಸಿದರೆ ಉಳಿದ ಮೂವರು 19 ರಿಂದ 23 ವರ್ಷ ವಯಸ್ಸಿನವರಾಗಿದ್ದಾರೆ.