ಭೋಜ್ಪುರ್ ಜಿಲ್ಲೆಯ ನಿವಾಸಿಯಾದ ಯುವತಿ ಮಹಾದಲಿತ ಸಮುದಾಯಕ್ಕೆ ಸೇರಿದಳಾಗಿದ್ದು, ಪರೀಕ್ಷೆಗಾಗಿ ತಯಾರಿ ನಡೆಸಲು ಬಿಹ್ತಾದಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಗೆಳೆಯನ ಭೇಟಿಗಾಗಿ ಹೊರಗಡೆ ಬಂದ ಸಂದರ್ಭದಲ್ಲಿ ಆಕೆಯ ಮೇಲೆ 6 ಜನರು ಗ್ಯಾಂಗ್‌ರೇಪ್ ನಡೆಸಿದ ಘಟನೆ ವರದಿಯಾಗಿದೆ.
ಯುವತಿ ಒಂದು ಸಣ್ಣ ಸೇತುವೆ ಬಳಿ ತನ್ನ ಗೆಳೆಯನನ್ನು ಭೇಟಿಯಾಗಲು ಹೋಗಿದ್ದಳು. ಆ ಸಮಯದಲ್ಲಿ ಅವರನ್ನು ಸುತ್ತುವರೆದ 6 ಜನ ಪುಂಡರ ಗುಂಪು, ಆಕೆಯನ್ನು ಹತ್ತಿರದ ಪೊದೆಯೊಂದರ ಬಳಿ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉರುವಲು ಕಟ್ಟಿಗೆಗಳನ್ನು ಸಂಗ್ರಹಿಸಲು ಕಾಡಿಗೆ ಬಂದಿದ್ದ ಮಹಿಳೆಯೊಬ್ಬರಿಗೆ ಯುವತಿಯ ಕಿರುಚಾಟ ಕೇಳಿಸಿದೆ. ಆಕೆ ಹಳ್ಳಿಯ ಜನರಿಗೆ ಈ ಕುರಿತು ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಹಳ್ಳಿಯ ಜನ ಕಟುಕರ ಕೈಯಿಂದ ಯುವತಿಯನ್ನು ಪಾರು ಮಾಡಿದ್ದಲ್ಲದೇ ಆರೋಪಿಗಳಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿ ದೀಪಕ್ ನೀಡಿದ ಮಾಹಿತಿಗಳನ್ನಾದರಿಸಿ ಭುರಾ ಯಾದವ್, ರಾಮ್ಜೀ ರೈ, ಸೋನು ಕುಮಾರ್ ಎಂಬುವವರನ್ನು ಬಂಧಿಸಲಾಯಿತು. ಪರಾರಿಯಾಗಿರುವವರನ್ನು ಚುಂಚನ್ ಕುಮಾರ್ ಮತ್ತು ನಂದ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.