ಸಿಎಂಗೆ ಇರಿಸುಮುರಿಸಾಗುವ ಪ್ರಶ್ನೆ ಕೇಳಿದ್ದಕ್ಕೆ ವರದಿಗಾರನಿಗೆ ಗೇಟ್ ಪಾಸ್

ಶುಕ್ರವಾರ, 23 ಡಿಸೆಂಬರ್ 2016 (14:50 IST)
ಹರ್ಯಾಣಾ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರಿಗೆ ಇರಿಸುಮುರಿಸಾಗುವ ಪ್ರಶ್ನೆ ಕೇಳಿದ್ದಕ್ಕೆ ಝೀ ಸುದ್ದಿವಾಹಿನಿ ತನ್ನನ್ನು ಕೆಲಸದಿಂದಲೇ ಕಿತ್ತು ಹಾಕಿದೆ ಎಂದು ವರದಿಗಾರನೊಬ್ಬ ಝೀ ಸುದ್ದಿವಾಹಿನಿ ವಿರುದ್ಧ ಆರೋಪಿಸಿದ್ದಾರೆ. 
 
ಬೇರೊಂದು ಸುದ್ದಿಮಾಧ್ಯಮದ ಜತೆ ಈ ಕುರಿತು ಮಾತನಾಡಿರುವ ವರದಿಗಾರ ಮಹೇಂದರ್ ಸಿಂಗ್, ಡಿಸೆಂಬರ್ 19 ರಂದು ನಾನು ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದೆ. ಅದೇ ಸಂಜೆ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಿಎಂ ಅವರ ವಿರುದ್ಧ ಅಣಕಗಳು ವ್ಯಕ್ತವಾದವು. ಹೀಗಾಗಿ ನಾನು ಕೆಲಸ ಮಾಡುತ್ತಿದ್ದ ಝೀ ಸುದ್ದಿವಾಹಿನಿ ನನ್ನಿಂದ ರಾಜೀನಾಮೆಯನ್ನು ತೆಗೆದುಕೊಂಡಿತು.
 
ಕೆಲಸ ಕಳೆದುಕೊಂಡಿರುವುದು ನನಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದರೂ ಹೆಮ್ಮೆಯಿಂದ ಕೆಲಸವನ್ನು ತ್ಯಜಿಸುತ್ತಿದ್ದೇನೆ ಎನ್ನುತ್ತಾರೆ ಸಿಂಗ್. 
 
ನನ್ನ ಕುಟುಂಬದಿಂದಲೂ ನನಗೆ ಸಂಪೂರ್ಣ ಬೆಂಬಲಿವಿದೆ. ನಾನು ಹೆಚ್ಚಿನ ಸಮಯವನ್ನು ರಾಜಕಾರಣಿಗಳಿಗೆ ಪಿಆರ್ ಆಗಿ ಕಳೆಯುವ ವರದಿಗಾರರಂತಲ್ಲ. ನಾನು ಎಂದಿಗೂ ರಾಜಕಾರಣಿಗಳ ಜತೆ ಸಂಪರ್ವನ್ನಿಟ್ಟುಕೊಂಡವನಲ್ಲ. ನನ್ನ ವಾಹನಕ್ಕೂ ಪ್ರೆಸ್ ಸ್ಟಿಕರ್ ಹಾಕಿಕೊಂಡು ಓಡಾಡುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. 
 
ಖಟ್ಟರ್ ನೋಟು ನಿಷೇಧದ ಬಗ್ಗೆ ನೀಡಿದ್ದ ವಿದಾದಾತ್ಮಕ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಸಿಂಗ್ ಪ್ರಶ್ನಿಸಿದ್ದರು. ಅದಕ್ಕುತ್ತರಿಸುವ ಬದಲು ಖಟ್ಟರ್ ಬೇರೆಯೇ ಉತ್ತರ ನೀಡಿದ್ದರು. ಹೀಗಾಗಿ ಖಟ್ಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವ್ಯಂಗ್ಯ, ಕುಹಕ ವ್ಯಕ್ತವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ