ಅದ್ಧೂರಿ ಮದುವೆ: ಕ್ಷೌರಿಕನಿಗೆ 2.5 ಲಕ್ಷ ಉಡುಗೊರೆ!

ಶುಕ್ರವಾರ, 4 ಮಾರ್ಚ್ 2011 (11:04 IST)
ರಾಜಧಾನಿ ನಗರಿಯಲ್ಲಿ ಅಬ್ಬರದ ಪ್ರಚಾರ ಕಂಡ ಗುಜ್ಜರ್ ವಿವಾಹ ಮಹೋತ್ಸವವು ನಿಜಕ್ಕೂ ಉತ್ಸವದಂತೆ ಮಂಗಳವಾರ ರಾತ್ರಿ ನಡೆದಿದೆ. ದಕ್ಷಿಣ ದೆಹಲಿಯ ಜೌನಾಪುರದಲ್ಲಿ, ತಿಂಗಳ ಹಿಂದಷ್ಟೇ ಕಬ್ಬು ಮತ್ತು ಸಾಸಿವೆ ಬೆಳೆಗಳಿಂದ ಕಂಗೊಳಿಸುತ್ತಿದ್ದ ಎಂಟೆಕರೆಯ ಎರಡು ಫಾರ್ಮ್‌ಗಳು ಪಂಚತಾರಾ ಸೆಟ್ಟಿಂಗ್‌ಗಳಾಗಿ ಪರಿವರ್ತನೆಗೊಂಡು, ಮರದ ಹಾಸು ಜೊತೆಗೆ ನಂಬಲಸಾಧ್ಯ ರೂಪ ಪಡೆದಿತ್ತು. ಈ ವಿವಾಹ ಮಹಾ ಉತ್ಸವಕ್ಕೆ ನೂರು ಕೋಟಿ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದ್ದು, ವರನ ಕಡೆಯಿಂದ ಬಂದ ಕ್ಷೌರಿಕನಿಗೇ 2.5 ಲಕ್ಷ ರೂ. ಭಕ್ಷೀಸು ನೀಡಲಾಗಿದೆ ಎನ್ನುತ್ತದೆ ಒಂದು ಮೂಲ.

ರಾಜಕಾರಣಿ ಕನ್ವರ್ ಸಿಂಗ್ ತನ್ವರ್‌ನ ಕಿರಿಯ ಪುತ್ರ ಲಲಿತ್ ಮತ್ತು ಸೋಹ್ನಾ ಮಾಜಿ ಶಾಸಕ ಸುಖಬೀರ್ ಸಿಂಗ್ ಜೌನಪುರಿಯಾರ ಪುತ್ರಿ ಯೋಗಿತಾ ವಿವಾಹಕ್ಕೆ ಈ ಒಂದು ಅದ್ದೂರಿಯ ವೇದಿಕೆ, ಪೆಂಡಾಲ್ ನಿರ್ಮಿಸಲು ಕಳೆದೊಂದು ತಿಂಗಳಿನಿಂದ ದೇಶದ ಮೂಲೆ ಮೂಲೆಗಳ ವಿವಿಧ ಕಲಾವಿದರು, ಕುಶಲಕರ್ಮಿಗಳು ಇಲ್ಲಿ ಬೀಡುಬಿಟ್ಟಿದ್ದರು. ಜೌನಾಪುರಿಯಾ ಅವರು ತನ್ವರ್‌ಗೆ 33 ಕೋಟಿ ರೂಪಾಯಿ ಮೌಲ್ಯದ ಏಳು ಆಸನಗಳುಳ್ಳ ಹೆಲಿಕಾಪ್ಟರ್ ಒಂದನ್ನು ಉಡುಗೊರೆಯಾಗಿಯೂ ನೀಡಿದ್ದಾರೆ.

ಇದೀಗ ಎಲ್ಲರ ಕಣ್ಣು ಭಾನುವಾರ ನಡೆಯುವ ಆರತಕ್ಷತೆಯ ಮೇಲೆ ಬಿದ್ದಿದೆ. ಹುಡುಗಿಯ ತಂದೆ ಸುಖಬೀರ್ ಸಿಂಗ್ ಅವರು ಗುರ್ಗಾಂವ್ ಮೂಲಕ ರಿಯಲ್ ಎಸ್ಟೇಟ್ ಘಟಕ ಎಸ್ಎಸ್ ಬಿಲ್ಡರ್ಸ್ ಒಡೆಯ.

ಆದರೆ, ಮದುವೆಗೆ ಭರ್ಜರಿ ಖರ್ಚು ಮಾಡುವ ಗುಜ್ಜರ್ ನಾಯಕರಲ್ಲಿ, ತನ್ವರ್ ಅವರು ಒಬ್ಬರೇ ಅಲ್ಲ. ಈ ಹಿಂದೆಯೂ ಸಾಕಷ್ಟು ಗುಜ್ಜರ ಮುಖಂಡರು ಐಷಾರಾಮಿ ವೈಭವೋಪೇತ ಮದುವೆ ನಡೆಸಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯುಉಡುಗೊರೆಗಳು ಸಾಮಾನ್ಯವಾಗಿದ್ದವು. ಹೆಚ್ಚಿನವರು ಶಾಸಕರೋ, ಮಾಜಿ ಶಾಸಕರೋ ಆಗಿರುತ್ತಾರೆ ತಮ್ಮ ಅಳಿಯನಿಗೆ ಐಷಾರಾಮಿ ಕಾರುಗಳು, ಭಾರೀ ಚಿನ್ನಾಭರಮಗಳನ್ನು ಉಡುಗೊರೆ ನೀಡುವುದು ಕೂಡ ಸಾಮಾನ್ಯವಾಗಿಬಿಟ್ಟಿವೆ ಎಂದು ಅಲ್ಲಿನ ನಿವಾಸಿಯೊಬ್ಬರು ಅನಿಸಿಕೆ ಹೇಳಿಕೊಂಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮದ ಏಳಿಗೆಯಿಂದಾಗಿ ಶ್ರೀಮಂತರಾಗಿಬಿಟ್ಟಿರುವ ಗುಜ್ಜರರು ಈ ರೀತಿ ಭಾರೀ ಖರ್ಚು ಮಾಡುವ ಮೂಲಕ ತಮ್ಮ ಸಮುದಾಯದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಬಡ, ಜಮೀನುರಹಿತ ಗುಜ್ಜರ್ ಸಮುದಾಯದವರು.

ಗುಜ್ಜರ್ ಸಮುದಾಯದ ಮದುವೆಯಲ್ಲಿ ಕ್ಷೌರಿಕರಿಗೆ ವಿಶೇಷ ಪ್ರಾಧಾನ್ಯತೆ ಇರುವುದರಿಂದ ಅವರಿಗೆ ದೊರೆಯುವ ಉಡುಗೊರೆಯೂ ದೊಡ್ಡದಾಗಿಯೇ ಇರುತ್ತದೆ. ಕೆಲವು ಮಂದಿ ಕಾರುಗಳನ್ನೂ ಪಡೆದದ್ದಿದೆಯಂತೆ.

ಉಳ್ಳವರು ಶಿವಾಲಯ ಮಾಡುವರಯ್ಯಾ ಎಂಬ ಮಾತು ನೆನಪಾಗುತ್ತಿದೆಯೇ?

ವೆಬ್ದುನಿಯಾವನ್ನು ಓದಿ