ಹಿರಿಯ ಕಾಂಗ್ರೆಸಿಗ ಅರ್ಜುನ್ ಸಿಂಗ್ ನಿಧನ

ಶುಕ್ರವಾರ, 4 ಮಾರ್ಚ್ 2011 (20:14 IST)
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ, ವಿವಾದಾಸ್ಪದ ರಾಜಕಾರಣಿ ಅರ್ಜುನ್ ಸಿಂಗ್ ಅವರು ಶುಕ್ರವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಎದೆ ನೋವು ಮತ್ತು ನರ ಸಂಬಂಧೀ ಕಾಯಿಲೆಗೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಎಐಐಎಂಎಸ್‌ಗೆ ದಾಖಲಾಗಿದ್ದ ಅವರಿಗೆ ಶುಕ್ರವಾರ ಸಂಜೆ ಐದೂವರೆ ವೇಳೆಗೆ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡಿತು. ಸಂಜೆ ಆರೂ ಕಾಲರ ವೇಳೆಗೆ ಹೃದಯಾಘಾತ ಸಂಭವಿಸಿ ಅವರು ನಿಧನಾದರು ಎಂದು ಮೂಲಗಳು ತಿಳಿಸಿವೆ.

ಗಾಂಧಿ ಕುಟುಂಬದ ನಿಷ್ಠಾವಂತ ಅನುಯಾಯಿಯಾಗಿದ್ದ ಅರ್ಜುನ್ ಸಿಂಗ್ ಅವರು ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿಯೂ ಕೆಲಸ ನಿರ್ವಹಿಸಿದ್ದರು. 80ರ ದಶಕದಲ್ಲಿ ರಾಜೀವ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಅವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಂಜಾಬಿನಲ್ಲಿ ಉಗ್ರವಾದ ತೀವ್ರ ಮಟ್ಟದಲ್ಲಿದ್ದಾಗ ಅಲ್ಲಿನ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು ರಾಜೀವ್-ಲೋಂಗೋವಾಲ್ ಒಪ್ಪಂದದ ರೂವಾರಿಯಾಗಿದ್ದರು.

ಕಾಕತಾಳೀಯವೋ ಎಂಬಂತೆ ಅರ್ಜುನ್ ಸಿಂಗ್ ಅವರು ಸಾವಿಗೆ ಕೆಲವೇ ಕ್ಷಣಗಳ ಹಿಂದೆ ಅವರನ್ನು ಕಾಂಗ್ರೆಸ್‌ನ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆ ಸಿಡಬ್ಲ್ಯುಸಿಯಿಂದ ಕೈಬಿಡಲಾಗಿತ್ತು ಮತ್ತು ಅವರನ್ನು ಖಾಯಂ ಆಹ್ವಾನಿತರು ಎಂದು ಮಾಡಲಾಗಿತ್ತು.

ಸಿಂಗ್ ಅವರು ಪತ್ನಿ ಸರೋಜಾ ದೇವಿ, ಇಬ್ಬರು ಪುತ್ರರು - ಮಧ್ಯಪ್ರದೇಶ ಶಾಸಕ ಅಜಯ್ ಸಿಂಗ್ ಹಾಗೂ ಅಭಿಮನ್ಯು ಮತ್ತು ಒಬ್ಬಳು ಮಗಳು ವೀಣಾ ಅವರನ್ನು ಅಗಲಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ್ದ ಭೋಪಾಲ ಅನಿಲ ದುರಂತ ಹಾಗೂ ಅದಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಮುಖ್ಯಸ್ಥ ವಾರೆನ್ ಆಂಡರ್ಸನ್ ಭಾರತದಿಂದ ತಪ್ಪಿಸಿಕೊಂಡು ಹೋಗುವಲ್ಲಿನ ಅವರ ಪಾತ್ರವು ಅವರ ರಾಜಕೀಯ ಬದುಕಿಗೆ ಅಳಿಸಲಾಗದ ಕಪ್ಪು ಚುಕ್ಕೆಯನ್ನಿಟ್ಟಿತ್ತು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿಯ ಪ್ರತಿಪಾದಕರೂ ಆಗಿದ್ದರವರು. ಮಾತ್ರವಲ್ಲದೆ ಚಂಬಲ್ ಡಕಾಯಿತರ ಹಾವಳಿಯ ಹುಟ್ಟಡಗಿಸಿದ ಖ್ಯಾತಿಯೂ ಅವರಿಗೆ ಸಲ್ಲುತ್ತದೆ.

ವೆಬ್ದುನಿಯಾವನ್ನು ಓದಿ